ಮೈಸೂರು: ಇಲ್ಲಿಗೆ ಸಮೀಪದ ಪಿರಿಯಾಪಟ್ಟಣ ಮತ ಎಣಿಕಾ ಕೇಂದ್ರದಲ್ಲಿ ಕರ್ತವ್ಯ ನಿರತ ಚುನಾವಣಾಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ವರದಿ ಆಗಿದೆ.
ಪಿರಿಯಾಪಟ್ಟಣದ ಪುಷ್ಪ ಕಾನ್ವೆಂಟ್ ನ ಮತ ಎಣಿಕಾ ಕೇಂದ್ರದಲ್ಲಿ ಚುನಾವಣಾ ಅಧಿಕಾರಿ ಬೋರೇಗೌಡ(52) ಎಂಬುವರು ಮೃತಪಟ್ಟಿದ್ದಾರೆ.
ಕುಶಾಲನಗರ ನಿವಾಸಿಯಾಗಿದ್ದ ಬೋರೇ ಗೌಡ ಅವರು ಪಿರಿಯಾಪಟ್ಟಣ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾಗಿ ಸೇವೆ ಸಲ್ಲಿಸುತಿದ್ದರು.
ಅವರು ಎನ್.ಶೆಟ್ಟಹಳ್ಳಿ ಗ್ರಾಪಂ ಚುನಾವಣಾ ಅಧಿಕಾರಿಯಾಗಿ ನೇಮಕವಾಗಿದ್ದ ಬೋರೇಗೌಡ ಅವರು, ಇಂದು ಮತ ಏಣಿಕೆಗಾಗಿ ಆಗಮಿಸಿದ್ದರು. ಆದರೆ ಮತ ಎಣಿಕೆಗೂ ಮುನ್ನ ತಮ್ಮ ಪಕ್ಕದಲ್ಲಿದ್ದವರಿಗೆ ಎದೆ ನೋವು ಆಗುತ್ತಿದೆ ಎಂದು ಹೇಳಿಕೊಂಡು ಕುಸಿದಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯುವ ವೇಳೆಯೇ ಮೃತ ಪಟ್ಟಿದ್ದಾರೆ.