ಮೈಸೂರು: ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ 6 ರಿಂದ 9 ತರಗತಿ ವರೆಗೆ ವಿದ್ಯಾಗಮ ಪುನಾರಂಭ ಮತ್ತು 10ನೇ ತರಗತಿಯನ್ನು ಜನವರಿ 1ರಿಂದ ಪ್ರಾರಂಭಿಸಲು ಮೈಸೂರು ಜಿಲ್ಲಾಡಳಿತ ಎಲ್ಲಾ ಕ್ರಮ ಕೈಗೊಂಡಿದ್ದು, ಆತಂಕ ಬೇಡ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 6 ರಿಂದ 10 ನೇ ತರಗತಿವರೆಗೆ ಒಟ್ಟು 2290 ಶಾಲೆಗಳಿದ್ದು, 208605 ವಿದ್ಯಾರ್ಥಿಗಳು ದಾಖಲಾಗಿದ್ದು 20088 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 6 ರಿಂದ 8ನೇ ತರಗತಿ ವರೆಗೆ 1576 ಶಾಲೆಗಳಿದ್ದು, 168495 ಮಕ್ಕಳು, 11893 ಶಿಕ್ಷಕರು ಇದ್ದಾರೆ. 9 ರಿಂದ 10ನೇ ತರಗತಿ 714 ಶಾಲೆಗಳಿದ್ದು, 40110 ಮಕ್ಕಳು, 8195 ಶಿಕ್ಷಕರು ಇದ್ದಾರೆ.
ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಹಾಗೂ ನಗರ ಪ್ರದೇಶಗಳಲ್ಲಿ ನಗರಪಾಲಿಕೆ/ನಗರಸಭೆ/ಪುರಸಭೆ ವತಿಯಿಂದ ಶಾಲೆಯ ಸುತ್ತಮುತ್ತಲಿನ ಪ್ರದೇಶ(200 ಮೀ ವ್ಯಾಪ್ತಿ), ಶಾಲಾವರಣ ಮತ್ತು ಶಾಲಾ ಶೌಚಾಲಯದ ನೈರ್ಮಲ್ಯ ಹಾಗೂ ಶಾಲೆಗಳ ಸ್ಯಾನಿಟೈಸೇಷನ್ ಕಾರ್ಯ ಮಾಡಲು ಸೂಚಿಸಲಾಗಿದೆ. ಹಾಗೆಯೇ ವಿದ್ಯಾರ್ಥಿಗಳ ಥರ್ಮಲ್ ಸ್ಕ್ರೀನಿಂಗ್ಗೆ ಅಗತ್ಯವಿರುವ ಥರ್ಮಲ್ ಸ್ಕ್ಯಾನರ್ ಗಳ ವ್ಯವಸ್ಥೆಯನ್ನು ಮಾಡಿಕೊಡಲು ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ.
ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ನಗರಪಾಲಿಕೆ, ನಗರಸಭೆ, ಪುರಸಭೆಗಳ ಆರೋಗ್ಯಾಧಿಕಾರಿಗಳು ಹಾಗೂ ಅವರ ಸಿಬ್ಬಂದಿಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳು ಮಾಸ್ಕ್ ಧರಿಸಿರುವ ಬಗ್ಗೆ, ಭೌತಿಕ ಅಂತರವನ್ನು ಕಾಪಾಡಿಕೊಂಡಿರುವ ಬಗ್ಗೆ, ಹಾಗೆಯೆ ವೈಯುಕ್ತಿಕ ಸ್ಯಾನಿಟೈಸರ್ ಬಳಕೆ ಮಾಡುವ ಬಗ್ಗೆ / ಕೈಗಳನ್ನು ಸೋಪಿನಿಂದ ಸ್ವಚ್ಛವಾಗಿ ತೊಳೆದುಕೊಳ್ಳುವ ಬಗ್ಗೆ ಮೇಲ್ವಿಚಾರಣೆಮಾಡಲು ಹಾಗೂ ಆರೋಗ್ಯ ಸುರಕ್ಷತೆ ಮತ್ತು ವೈಯಕ್ತಿಕ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲು ಸೂಚಿಸಲಾಗಿದೆ. ಹಾಗೆಯೇ ಅನಾರೋಗ್ಯ ಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆಗೆ ಕ್ರಮವಹಿಸಲು ತಿಳಿಸಲಾಗಿದೆ. ಶಾಲಾ ಶಿಕ್ಷಕರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಕಡ್ಡಾಯಗೊಳಿಸಿಲಾಗಿದೆ ಹಾಗೂ ಈಗಾಗಲೇ ಈ ಪ್ರಕ್ರಿಯೆ ಪ್ರಾರಂಭವಾಗಿರುತ್ತದೆ.
ಶಾಲೆಗಳಲ್ಲಿ ಕುಡಿಯಲು ಶುದ್ಧ ನೀರು ಅಥವಾ ಬಿಸಿನೀರಿನ ವ್ಯವಸ್ಥೆಯನ್ನು ಕೂಡ ಮಾಡಲು ತಿಳಿಸಲಾಗಿದೆ. ಆನ್ಲೈನ್ ತರಗತಿ ಅಪೇಕ್ಷಿಸುವ ವಿದ್ಯಾರ್ಥಿಗಳಿಗೂ ಕೂಡ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಮುಂಚಿತವಾಗಿ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ‘ನಮ್ಮ ಶಾಲೆಯಿಂದ ಸೋಂಕು ಹರಡುವುದಿಲ್ಲ’ ಎಂಬಂತಹ ಫೋಷವಾಕ್ಯಗಳನ್ನು ಬರೆಸಿ, ಅಗತ್ಯ ಸ್ಥಳಗಳಲ್ಲಿ ಪ್ರದರ್ಶಿಸಲು ಕ್ರಮವಹಿಸುವಂತೆ ತಿಳಿಸಲಾಗಿದೆ.
ಪ್ರತಿ ದಿನ ಶಿಕ್ಷಕರು ಶಾಲೆಯಲ್ಲಿ ಮಕ್ಕಳನ್ನು ಅವಲೋಕಿಸಿ ಕೋವಿಡ್-19 ಲಕ್ಷಣ ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಆಸ್ಪತ್ರೆ/ಆರೋಗ್ಯ ಕೇಂದ್ರಕ್ಕೆ ತಪಾಸಣೆಗೆ ಸೂಚಿಸಲು ತಿಳಿಸಲಾಗಿದೆ.ಸರ್ಕಾರದ ನಿರ್ದೇಶನದಂತೆ ಮಧ್ಯಾಹ್ನ ಉಪಾಹಾರ ಯೋಜನೆಯಡಿ ಬಿಸಿಯೂಟದ ಬದಲು ಆಹಾರ ಧಾನ್ಯಗಳನ್ನು ವಿತರಿಸುತ್ತಿರುವುದನ್ನು ಮುಂದುವರೆಸಲು ತಿಳಿಸಲಾಗಿದೆ.
ಶಾಲೆಯ ಹಂತದಲ್ಲಿ ಎಲ್ಲಾ ರೀತಿಯ ಪೂರ್ವಸಿದ್ಧತೆಯನ್ನು ಮಾಡಿಕೊಂಡಿರುವುದರಿಂದ ಪೋಷಕರು ಮಕ್ಕಳನ್ನು ನಿರ್ಭಯವಾಗಿ ಶಾಲೆಗೆ ಕಳುಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.