ಮೈಸೂರು: ನಗರದ ವಿನೋಬಾ ರಸ್ತೆ ಕಲಾಮಂದಿರದಿಂದ ಕುಕ್ಕರಳ್ಳಿ ಕೆರೆಗೆ ಹೋಗುವ ರಸ್ತೆಗೆ `ಪದ್ಮಶ್ರೀ ಬಿ.ವಿ.ಕಾರಂತ ರಸ್ತೆ’ ಎಂದು ನಾಮಕರಣ ಮಾಡಬೇಕೆಂದು ಒತ್ತಾಯಿಸಿ ಇಂದು ರಂಗಾಯಣದಿಂದ ಅಭಿಯಾನ ನಡೆಸಲಾಯಿತು.
ಬಿ.ವಿ.ಕಾರಂತರು ಭಾರತೀಯ ರಂಗಭೂಮಿಯಲ್ಲಿ `ರಂಗಭೀಷ್ಮ’ ಎಂದು ಕರೆಸಿಕೊಂಡವರು. ಆಧುನಿಕ ಕನ್ನಡ ರಂಗಭೂಮಿಯಲ್ಲಿ ಒಬ್ಬ ನಿರ್ದೇಶಕರಾಗಿ, ಸಂಗೀತ ನಿರ್ದೇಶಕರಾಗಿ ತನ್ನದೇ ಆದ ಛಾಪನ್ನು ಮೂಡಿಸಿರುವ ಒಬ್ಬ ರಂಗ ಶ್ರೇಷ್ಠ. ಇವರ ಹೆಸರನ್ನು ಚಿರಸ್ಥಾಯಿಯಾಗಿಸಲು ಕರ್ನಾಟಕ ಕಲಾಮಂದಿರ ಮತ್ತು ರಂಗಾಯಣಕ್ಕೆ ಹೊಂದಿಕೊಂಡಿರುವ (ಹುಣಸೂರು ಮುಖ್ಯರಸ್ತೆಯಿಂದ ಕುಕ್ಕರಹಳ್ಳಿ ಕೆರೆಯ ಕಡೆಗೆ ರೈಲ್ವೆ ಗೇಟ್ ತನಕ) ರಸ್ತೆಗೆ `ಪದ್ಮಶ್ರೀ ಬಿ.ವಿ.ಕಾರಂತ ರಸ್ತೆ’ ಎಂದು ನಾಮಕರಣ ಮಾಡಬೇಕೆಂದು ಈ ಅಭಿಯಾನದ ಮೂಲಕ ಒತ್ತಾಯಿಸಿದರು.
ಈ ಕುರಿತು ಮೈಸೂರು ಮಹಾನಗರಪಾಲಿಕೆಯ ಮಹಾಪೌರರಾದ ತಸ್ನೀಂ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಇದ್ದರು.