ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ( ಕೆಎಸ್ಒಯು) ಮತ್ತೊಂದು ಹೆಗ್ಗಳಿಕೆ ಪಡೆದಿದೆ. ರಾಜ್ಯ ಸರ್ಕಾರವು ಮುಕ್ತ ಹಾಗೂ ದೂರ ಶಿಕ್ಷಣ ಕಾರ್ಯಕ್ರಮ ನಡೆಸುವ ಏಕಮಾತ್ರ ವಿಶ್ವವಿದ್ಯಾಲಯ ಎಂದು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯವೆಂದು ಘೋಷಿಸಿದೆ.
ಇಂದು ಪತ್ರಿಕಾ ಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಕೆಎಸ್ಓಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್, ಸರ್ಕಾರವು ಕೆಎಸ್ ಒಯು ಕಾಯ್ದೆ ತಿದ್ದುಪಡಿ ಮಾಡಿ ಮುಕ್ತ ಹಾಗೂ ದೂರ ಶಿಕ್ಷಣ ನಡೆಸುವ ಏಕಮಾತ್ರ ವಿಶ್ವವಿದ್ಯಾಲಯವನ್ನಾಗಿ ಘೋಷಣೆ ಮಾಡಿದೆ. ‘ಎಲ್ಲರಿಗೂ ಎಲ್ಲೆಡೆ ಶಿಕ್ಷಣ’ ಎಂಬುದು ಕೆಎಸ್ ಓಯುನ ಉದ್ದೇಶವಾಗಿದ್ದು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಕೆಎಸ್ ಒಯು ಕನಸು ನನಸಾಗಿದೆ. ಇದಕ್ಕೆ ಕಾರಣವಾದ ರಾಜ್ಯಪಾಲರಾದ ವಜುಭಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಧನ್ಯವಾದಗಳು ಎಂದು ಹೇಳಿದರು.
ಕೆಎಸ್ ಓಯು ಈಗ 25 ವರ್ಷಗಳನ್ನು ಪೂರೈಸಿದೆ. ಈ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ಹೊಸ ಕಾರ್ಯಕ್ರಮಗಳನ್ನ ಪರಿಚಯ ಮಾಡಲಾಗುವುದು. ಸ್ಪರ್ಧಾತ್ಮಕ ಕೇಂದ್ರಕ್ಕೆ ತರಬೇತಿಗೆ ಪೂರಕವಾದ 2್ಠ47 ಗ್ರಂಥಾಲಯ, ವಸತಿ ಸೌಲಭ್ಯವುಳ್ಳ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಕಳೆದ ಒಂದೂವರೆ ವರ್ಷದಲ್ಲಿ ಕೆಎಸ್ ಓಯು ಸಾಕಷ್ಟು ಡಿಜಿಟಲ್ ಆಗಿದೆ. ಪ್ರವೇಶಾತಿ ಪ್ರಕ್ರಿಯೆ ಗಣಕೀಕರಣವಾಗಿದೆ. ಆನ್ಲೈನ್ ತರಗತಿಗಳು, ಕೆಎಸ್ ಓಯು ಸ್ಟೂಡೆಂಟ್ ಆ್ಯಪ್ ಗಳನ್ನು ಬಿಡುಗಡೆ ಮಾಡಲಾಗಿದೆ. ಅಧ್ಯಾಪಕರ ಪದೋನ್ನತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.