ಮೈಸೂರು: ನಗರಕ್ಕೊಂದು ಸುತ್ತು ಹೊಡೆದರೆ ಒಂದೆರಡಲ್ಲ ಸಾವಿರಾರು ಟೀ ಅಂಗಡಿಗಳು ನೋಡಲು ಸಿಗುತ್ತವೆ. ಈ ಟೀ ಅಂಗಡಿಗಳ ಮುಂದೆ ಟೀ ಕುಡಿಯುತ್ತಾ ಕುಳಿತ ದಂಡು ಕೂಡ ಕಾಣಿಸುತ್ತದೆ. ಕೆಲವರು ಟೀ ಕಪ್ ಜತೆಗೆ ಕೈನಲ್ಲಿ ಸಿಗರೇಟ್ ಹಿಡಿದುಕೊಂಡು ಒಂದೊಂದೇ ಧಮ್ ಎಳೆಯುತ್ತಾ ಟೀ ಕುಡಿಯುತ್ತಿರುತ್ತಾರೆ. ಇದು ಆರೋಗ್ಯಕ್ಕೆ ಮಾರಕ ಎಂದು ಗೊತ್ತಿದ್ದರೂ ಜನ ಅದನ್ನೇ ಮಾಡುತ್ತಾರೆ. ವ್ಯಾಪಾರದ ದೃಷ್ಠಿಯಿಂದ ಟೀ ಅಂಗಡಿ ಮಾಲೀಕರು ಕೂಡ ಅದಕ್ಕೆ ಅವಕಾಶ ಕೊಡುತ್ತಾರೆ.
ಇಂತಹ ಟೀ ಅಂಗಡಿಗಳಿಗೆ ತದ್ವಿರುದ್ಧವಾಗಿ ಸಿಗರೇಟ್ಗೆ ಅವಕಾಶ ನೀಡದೆ, ಶುದ್ಧ ಮತ್ತು ಆರೋಗ್ಯಯುತವಾದ ಟೀ ಯನ್ನು ಗ್ರಾಹಕರಿಗೆ ನೀಡುವ ಸಲುವಾಗಿಯೇ ಇದೀಗ ಮೈಸೂರು ನಗರದಲ್ಲೊಂದು ಹೈಟೆಕ್ ಆರೋಗ್ಯಯುತ ಟೀ ಅಂಗಡಿ ಆರಂಭವಾಗಿದೆ. ಅದರ ಹೆಸರು ಪುಣೇರಿ ಶ್ರೀಮಾನ್ ಅಮೃತತುಲ್ಯ ಚಹಾ ಅಂಗಡಿ. ನಗರದ ದೇವರಾಜ ಅರಸ್ ರಸ್ತೆಯ ಮೋರ್ ಮೇಗಾಸ್ಟೋರ್ ಗೆ ತೆರಳುವ ಮಾರ್ಗದಲ್ಲಿರುವ ಈ ಟೀ ಅಂಗಡಿಯ ಹೆಸರು ಕೇಳಿದರೆ ಸ್ವಲ್ಪ ಮಟ್ಟಿಗೆ ಅಚ್ಚರಿ.. ಜತೆಗೆ ಇಲ್ಲಿನ ಟೀ ಯನ್ನು ಸೇವಿಸಿದರೆ ಇನ್ನಷ್ಟು ಖುಷಿಯೂ ಆಗುತ್ತದೆ. ಇಲ್ಲಿ ಸಿಗುವ ಟೀ ಇತರೆಡೆಗಿಂತ ಭಿನ್ನ ಮತ್ತು ವಿಶಿಷ್ಟವಾಗಿದೆ ಎನ್ನುವುದಂತು ನಿಜ..
ಇಲ್ಲಿ ದೊರೆಯುವ ಟೀ ಬರೀ ಟೀ ಅಲ್ಲ ಆರೋಗ್ಯ ವರ್ಧಕಗಳಿಂದ ಸಮ್ಮಿಶ್ರಣಗೊಂಡ ಮಸಾಲೆ ಟೀ ಆಗಿದ್ದು ಇದು ಕೇವಲ ನಾಲಿಗೆಗೆ ಮಾತ್ರ ರುಚಿ ನೀಡುವುದಲ್ಲ ಆರೋಗ್ಯಕ್ಕೂ ಹಿತವಾಗಿದೆ. ಹೀಗಾಗಿ ಈ ಟೀ ಅಂಗಡಿ ಮುಂದೆ ಟೀ ಗಾಗಿ ದಿನಾಲೂ ಗ್ರಾಹಕರ ದೊಡ್ಡ ಸಾಲು ನೆರೆದಿರುತ್ತದೆ. ಇಷ್ಟಕ್ಕೂ ಮೈಸೂರಿನಲ್ಲಿ ತೆರೆದ ಪುಣೇರಿ ಶ್ರೀಮಾನ್ ಅಮೃತತುಲ್ಯ ಚಹಾ ಅಂಗಡಿಯ ಮಾಲೀಕರಾದ ಸತೀಶ್ ಭಟ್ ಅವರು ಮೂಲತಃ ಬೆಳಗಾವಿಯವರು. ಈಗಾಗಲೇ ಪುಣೇರಿ ಶ್ರೀಮಾನ್ ಅಮೃತತುಲ್ಯ ಚಹಾ ಎಲ್ಲೆಡೆ ಹೆಸರುವಾಸಿಯಾಗಿದೆ. ಆದರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದು ಇಲ್ಲ ಎಂಬುದು ಅವರಿಗೆ ಗೊತ್ತಾದ ಬಳಿಕ ಅವರು ಮೈಸೂರು ನಗರದಲ್ಲಿ ಸರ್ವೆ ಮಾಡಿ ಬಳಿಕ ಪೂನಾಕ್ಕೆ ತೆರಳಿ ಈ ಚಹಾ ಮಾಡುವ ಬಗ್ಗೆ ತರಬೇತಿ ಪಡೆದರು. ಬಳಿಕ ಬಂದು ಮೈಸೂರು ನಗರದಲ್ಲಿ ಚಹಾ ಅಂಗಡಿ ಆರಂಭಿಸಿದರು. ಮೊದಲಿಗೆ ಒಂದು ಕಪ್ಗೆ ಒಂದು ರೂ.ನಂತೆ ನೀಡಿದರು. ಜನ ಬಂದು ಈ ಟೀ ಸೇವಿಸಿ ನೋಡಿದರು. ಮಸಾಲೆಯುಕ್ತ ಟೀ ಹಲವರ ಗಮನಸೆಳೆಯಿತು. ನೋಡ ನೋಡುತ್ತಿದ್ದಂತೆಯೇ ಜನ ಟೀ ಅಂಗಡಿಯತ್ತ ಬರತೊಡಗಿದರು.
ಇಲ್ಲಿ ತಯಾರು ಮಾಡುವ ಟೀ ನಲ್ಲಿ ಶುಂಠಿ, ಪುದಿನಾ, ಏಲಕ್ಕಿ, ಇನ್ನಿತರೇ ಸ್ವದೇಶಿ ಮಸಾಲೆ ಪದಾರ್ಥಗಳನ್ನು ನಿರ್ಧಿಷ್ಟ ಪ್ರಮಾಣದಲ್ಲಿ ಹಾಕಿ ತಯಾರಿಸಲಾಗುತ್ತದೆ. ಇದರಿಂದ ಸಾಮಾನ್ಯವಾಗಿ ಟೀ ಕುಡಿದರೆ, ಯಾವುದೇ ಅಸಿಡಿಟಿಯಾಗಲೇ ಇನ್ನಿತರೆ ತೊಂದರೆಗಲಾಗಲೀ, ಆರೋಗ್ಯದಲ್ಲಿ ಅಡ್ಡಪರಿಣಾಮಗಳಾಗಲೀ ಆಗುವುದಿಲ್ಲ ಎನ್ನುವುದು ಮಾಲೀಕರಾದ ಸತೀಶ್ ಭಟ್ ಅವರ ಭರವಸೆಯ ಮಾತಾಗಿದೆ. ಈ ಟೀಯನ್ನು ಮಾಮೂಲಿನಂತೆ ತಯಾರು ಮಾಡುವುದಿಲ್ಲ ಜತೆಗೆ ಟೀ ಪುಡಿಯನ್ನು ಕೂಡ ಉತ್ಕೃಷ್ಟ ದರ್ಜೆಯದನ್ನೇ ಬಳಸಲಾಗುತ್ತದೆ. ಮಸಾಲೆ ಪದಾರ್ಥಗಳನ್ನು ಕೂಡ ನಿಯಮಿತವಾಗಿ ಬಳಸಿ ಹಿತ್ತಾಳೆ ಪಾತ್ರೆಯಲ್ಲಿ ಎಲ್ಲಾ ಮಿಶ್ರಣವನ್ನು ಹಾಕಿ ಅದೇ ಪಾತ್ರೆಯಲ್ಲಿ ಚಹಾ ತಯಾರಿಸುವುದರಿಂದ ಜತೆಗೆ ವೈಜ್ಞಾನಿಕ ಅಳತೆಯನ್ನು ಟೀ ಮಾಡಲು ಬಳಸುತ್ತಿರುವುದು ವಿಶೇಷವಾಗಿದ್ದು, ಇದುವೇ ವಿಶಿಷ್ಟ ರುಚಿಯನ್ನು ನೀಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಈ ಟೀ ತಯಾರು ಮಾಡುವ ತಯಾರಕರು ಕೂಡ ತರಬೇತಿ ಪಡೆದಿದ್ದು, ಸ್ವಾದಿಷ್ಟ ಟೀ ತಯಾರಿಸಿ ಈಗಾಗಲೇ ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎನ್ನುವುದಕ್ಕೆ ಒಬ್ಬರೇ ಗ್ರಾಹಕರು ಮತ್ತೆ, ಮತ್ತೆ ಟೀ ಕುಡಿಯಲು ಇಲ್ಲಿಗೆ ಬರುವುದು ಸಾಕ್ಷಿಯಾಗಿದೆ. ಇನ್ನು ಇಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಟೀ ಜತೆ ಸಿಗರೇಟ್, ಗುಟ್ಕಾ ಮೊದಲಾದವುಗಳಿಗೆ ಅವಕಾಶವಿಲ್ಲ. ಇಲ್ಲಿ ಟೀ ಕುಡಿಯಲ್ಲಷ್ಟೆ ಅವಕಾಶ. ಇನ್ನು ಟೀ ಕುಡಿಯಲು ಬರುವ ಗ್ರಾಹಕರನ್ನು ಈ ಬಗ್ಗೆ ಕೇಳಿದರೆ ಇಲ್ಲಿ ಟೀ ಕುಡಿದರೆ ರಿಲ್ಯಾಕ್ಸ್ ಆಗುತ್ತದೆ ಹೀಗಾಗಿ ಬರುತ್ತೇವೆ ಎನ್ನುತ್ತಾರೆ. ಹೀಗಾಗಿಯೇ ಇರಬೇಕು ಇಲ್ಲಿನ ಟ್ಯಾಗ್ ಲೈನ್ ಒಂದು ಸಾರಿ ಸವಿದರೆ ಪುನಃ ಮರಳಿ ಬರುವಿರಿ… ಒಟ್ಟಾರೆಯಾಗಿ ಹೇಳಬೇಕೆಂದರೆ ಪುಣೇರಿ ಶ್ರೀಮಾನ್ ಅಮೃತತುಲ್ಯ ಚಹದಂಗಡಿ ಸಾಂಸ್ಕøತಿಕ ನಗರಿಯ ಜನಕ್ಕೆ ಹೊಸ ಮಾದರಿಯ ಆರೋಗ್ಯಕರ ಟೀ ನ ಸ್ವಾದವನ್ನು ಪರಿಚಯಿಸಿರುವುದಂತು ನಿಜ…..