ಮೈಸೂರು: ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಕೆಆರ್ ಎಸ್ ರಸ್ತೆಯಲ್ಲಿರುವ ಬ್ರಿಗೇಡ್ ಅಪಾರ್ಟ್ ಮೆಂಟ್ ನಿಂದ ರಾಯಲ್ ಇನ್ ಹೋಟೆಲ್ ವರೆಗೆ ಫ್ಲೈ ಓವರ್ ನಿರ್ಮಿಸುವ ಕಾಮಗಾರಿಗೆ ಸಂಬಂಧಿಸಿದಂತೆ ಇಂದು ಸಂಸದ ಪ್ರತಾಪ್ ಸಿಂಹ ಅವರು ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ರೈಲ್ವೆ ಲೆವೆಲ್ ಕಾರ್ಸಿಂಗ್ ಇದ್ದು ಪ್ರವಾಸಿಗರು ಸಲೀಸಾಗಿ ಕೆಆರ್ ಎಸ್ ಗೆ ತೆರಳಲು ಅಡಚಣೆ ಆಗುತ್ತಿದೆ. ಮೊದಲಿಗೆ ಗ್ರೇಡ್ ಸಪ್ರೇಟರ್ ನಿರ್ಮಿಸುವ ಪ್ರಸ್ತಾಪ ಇದ್ದು ಈಗ ಅದನ್ನು ಕೈ ಬಿಟ್ಟು ಫ್ಲೈ ಓವರ್ ಮಾಡಿ ಕೆಆರ್ ಎಸ್ ರಸ್ತೆ ಕಡೆಗೆ ಸರಾಗವಾಗಿ ಚಲಿಸುವುದಕ್ಕೆ ಅನುವು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ ಎಂದರು.
2016-17ರ ಬಜೆಟ್ ನಲ್ಲಿ ಕೆಆರ್ ಎಸ್ ರಸ್ತೆಯ ರೈಲ್ವೆ ಹಳಿಯಲ್ಲಿ ಓವರ್ ಬ್ರಿಡ್ಜ್ ಮಾಡಲು ಎಂದು ಕೇಂದ್ರ ಸರ್ಕಾರದಿಂದ ಅನುಮೋದನೆ ಸಿಕ್ಕಿತ್ತು. ಆದರೆ ಆಗ ರಿಂಗ್ ರಸ್ತೆ ನಗರಾಭಿವೃದ್ಧಿ ಮುಡಾ ನಿಯಂತ್ರಣದಲ್ಲಿತ್ತು. ಮುಂದಿನ ಹಂತ ಪಿಡಬ್ಲ್ಯೂಡಿ ಮತ್ತು ನಗರಪಾಲಿಕೆ ನಿಯಂತ್ರಣದಲ್ಲಿತ್ತು. ಹಾಗಾಗಿ ರೈಲ್ವೆ, ಮುಡಾ, ನಗರಪಾಲಿಕೆ, ಪಿಡಬ್ಲ್ಯೂಡಿ ಈ ನಾಲ್ಕು ಇಲಾಖೆ ಸೇರಿ ಒಂದೇ ಒಂದು ಫ್ಲೈ ಓವರ್ ಓವರ್ ಮಾಡಬೇಕಿತ್ತು. ಆದರೆ ಇಲಾಖೆಗಳಲ್ಲಿನ ಹೊಂದಾಣಿಕೆ ಕೊರತಿಯಿಂದಾಗಿ ಇದು ಆಗಿರಲಿಲ್ಲ. ಕೊನೆಗೆ ಅದನ್ನು ರೈಲ್ವೆ ಅಂಡರ್ ಪಾಸ್ ನಿರ್ಮಿಸಲು ಯೋಜಿಸಲಾಗಿತ್ತು. ಆದರೆ ರೈಲ್ವೆ ಅಂಡರ್ ಪಾಸ್ ಮಾಡಿದರೆ ಸಮಸ್ಯೆಯಾಗುತ್ತದೆ ಎಂದು ಮೊದಲಿನ ಯೋಜನೆಯಂತೆ ಫ್ಲೈ ಓವರ್ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಫ್ಲೈ ಓವರ್ ನಿರ್ಮಾಣದ ಅಂದಾಜು ವೆಚ್ಚ ಈ ಹಿಂದೆ 41 ಕೋಟಿ ರೂ. ಆಗಿತ್ತು. ರೈಲ್ವೆಯಿಂದ 10.7 ಕೋಟಿ ರೈಲ್ವೆ ಕೊಡಬೇಕಿತ್ತು. ಅದನ್ನು ಈಗಾಗಲೇ ಮಂಜೂರು ಮಾಡಲಾಗಿದೆ. ಮುಡಾ ನಿಯಂತ್ರಣದಲ್ಲಿದ್ದಂತಹ ರಿಂಗ್ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮಾಡಿಕೊಂಡಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ದೊಡ್ಡ ಮೊತ್ತದ ಹಣ ಕೊಡಬೇಕಾಗಿದೆ. ಜೊತೆಗೆ ನಗರಪಾಲಿಕೆ, ಪಿಡಬ್ಲ್ಯೂಡಿ ಅವರಿಗೆ ಸಣ್ಣ ಪ್ರಮಾಣದ ಹಣ ಕೊಡಬೇಕಾಗುತ್ತದೆ. ಅದನ್ನು ಆದಷ್ಟು ಬೇಗ ಕೊಡಿಸಿ ಫ್ಲೈ ಓವರ್ ನಿರ್ಮಾಣ ಮಾಡಲಾಗುವುದು. ಪುನರ್ವಿಮರ್ಶಿಸಿದ ಡಿಪಿಆರ್ ಆದ ನಂತರ ಅಂದಾಜು ವೆಚ್ಚ ಹೆಚ್ಚಾಗುವ ಸಾಧ್ಯತೆ ಇದೆ ಎಂದರು.