ಮೈಸೂರು: ದೆಹಲಿಯಲ್ಲಿ ಇಗ ಪ್ರತಿಭಟನೆ ಮಾಡುತ್ತಿರುವ ರೈತರು ಕೇವಲ ಪಂಜಾಬಿಗಳಾಗಿದ್ದು ಇವರು ಇಡೀ ದೇಶದ ರೈತರನ್ನು ಪ್ರತಿನಿಧಿಸುತ್ತಿಲ್ಲ ಎಂದು ಹೇಳಿದ ನಾಡಿನ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಕೃಷಿ ಕಾಯ್ದೆ ತಿದ್ದುಪಡಿಗೆ ಬೆಂಬಲ ಸೂಚಿಸಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃಷಿ ಕಾಯ್ದೆಗಳು ರೈತರಿಗೆ ಅನುಕೂಲವೇ ಆಗಿದ್ದು ರೈತ ಬೆಳೆದ ಬೆಳೆಯನ್ನು ಎಪಿಎಂಸಿಯಲ್ಲೇ ಮಾರದೆ ಎಲ್ಲಿ ಬೇಕಾದರೂ ಮಾರುವ ಸ್ವಾತಂತ್ರ್ಯ ಸಿಕ್ಕಿದೆ. ಖಾಸಗಿಯವರು ರೈತರ ಜಮೀನಿಗೆ ಹೋಗಿ ಎಪಿಎಂಸಿಗಿಂತ ಜಾಸ್ತಿ ಬೆಲೆ ಕೊಟ್ಟು ಖರೀದಿ ಮಾಡ್ತಾರೆ. ಆದರೆ, ಈ ರೈತ ಹೋರಾಟದ ಹಿಂದೆ ಕಾಂಗ್ರೆಸ್, ಕಮ್ಯೂನಿಸ್ಟರ ಕೈವಾಡವಿದೆ ಎಂದರು.
ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ವಿಪಕ್ಷಗಳಿಗೆ ಸಹಿಸಲು ಆಗುತ್ತಿಲ್ಲ. ಮೋದಿಯವರು ವಿಶ್ವದಲ್ಲೇ ಸಮರ್ಥ ನಾಯಕ ಅಂತಾ ಬೇರೆ ದೇಶದ ನಾಯಕರೇ ಹೇಳ್ತಿದ್ದಾರೆ. ಕೊರೊನಾ ಸಂದರ್ಭದಲ್ಲಂತೂ ಪಾಶ್ಚಾತ್ಯ ದೇಶಗಳಿಗಿಂತ ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ರಾಮನಲ್ಲ, ಶ್ರೀಕೃಷ್ಣ ಇದ್ದಹಾಗೆ. ಮೋದಿ ಅಧಿಕಾರಕ್ಕೆ ಬಂದಾಗ ಕೆಲವರು(ಒಪಿನಿಯನ್ ಮೇಕರ್ಗಳು) ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವ ಕೆಲಸ ಮಾಡಿದರು. ಆದರೆ ಈಗ ಅದು ನಡೆಯಲ್ಲ ಎಂದು ಅವರು ಒಪಿನಿಯನ್ ಮೇಕರ್ಗಳು ಈಗಲೂ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದರೆ ಮೋದಿ ಶ್ರೀಕೃಷ್ಣನಂತೆ ಕೆಲಸ ಮಾಡುತಿದ್ದಾರೆ ಎಂದರು.
ರಾಮನು ಆದರ್ಶ ಪುರುಷ ,ಆದರ್ಶ ಪಾಲನೆ ಮಾಡಲು ಸೀತೆಯನ್ನು ಕಾಡಿಗೆ ಕಳುಹಿಸಿದ ರಾಮನ ನಿರ್ಧಾರವು ಆದರ್ಶದ ರೂಪದಲ್ಲಿ ನೋಡಿದಾಗ ಸರಿಯಾಗಿದ್ದರೂ, ಸೀತೆಯ ವಿಚಾರ ಗಮನಿಸಿದಾಗ ತಪ್ಪು ಅನ್ನಿಸುತ್ತದೆ. ನಾನು ಉತ್ತರಕಾಂಡ ಪುಸ್ತಕ ಬರೆಯುವಾಗ ಸೀತೆ ದೃಷ್ಟಿಯಿಂದ ಬರೆದಿದ್ದೇನೆ ಎಂದರು.
ಬೇರೆ ಧರ್ಮದಲ್ಲೂ ವಿಶಾಲ ಹೃದಯದವರಿದ್ದಾರೆ
ಹಿಂದೂ ಧರ್ಮದ ವಿಶಾಲ ಹೃದಯ ಅನ್ಯಧರ್ಮೀಯರಲ್ಲೂ ಇದ್ದರೆ ಧಾರ್ಮಿಕ ವಿಷಯದಲ್ಲಿ ಹೊಡೆದಾಟ-ಬಡಿದಾಟ ನಡೆಯಲ್ಲ. ರಾಮ,ಕೃಷ್ಣ,ಶಿವನನ್ನು ಟೀಕೆ ಮಾಡಬಹುದು.ಆದರೆ, ಅನ್ಯಧರ್ಮೀಯರ ದೇವರನ್ನು ಟೀಕೆ ಮಾಡಿದರೆ ಯಾರು ಸಹಿಸಲ್ಲ. ಅನ್ಯಧರ್ಮೀಯರ ದೇವರುಗಳು ಕೋಪಿಷ್ಟರಾಗಿರುವ ಕಾರಣ ಸ್ವಲ್ಪ ಟೀಕೆ ಮಾಡಿದರೂ ಅವರ ಭಕ್ತರೇ ಬಂದು ಹೊಡೆಯುತ್ತಾರೆ ಎಂದರು.
ಗೋವಿಗೂ ನಮಗೂ ಇರೋದು ತಾಯಿ ಮಕ್ಕಳ ಸಂಬಂಧ. ಗೋವು ಅಹಿಂಸೆಯ ಪ್ರತೀಕ. ಚಿಕ್ಕಂದಿನಿಂದ ಗೋವಿನ ಹಾಲು ಕುಡಿದೇ ಎಲ್ಲರೂ ಬೆಳೆದಿದ್ದೇವೆ. ವಯಸ್ಸಾದ ಮೇಲೆ ತಾಯಿಯನ್ನು ನಿರುಪಯುಕ್ತ ಅಂತ ಹೇಳಲಾಗುವುದೇ? ಎಂದು ಅವರು ಕೇಳಿದರು.
ಗೋವು ಹಾಲು ಕೊಡುವುದನ್ನು ನಿಲ್ಲಿಸಿದ ಮೇಲೂ ಗೊಬ್ಬರ ಕೊಡುತ್ತದೆ. ನಾವೀಗ ಕೆಮಿಕಲ್ಯುಕ್ತ ಆಹಾರವನ್ನು ತಿನ್ನುತ್ತಿರುವ ಕಾರಣದಿಂದಲೇ ಕ್ಯಾನ್ಸರ್ ಬರ್ತಿದೆ. ಗೋವುಗಳನ್ನು ರೈತರು ಗೊಬ್ಬರದ ಸಲುವಾಗಿಯಾದ್ರೂ ಸಲಹಬೇಕು. ಗೋವನ್ನು ಟೀಕಿಸುವವರು ಮೂಲಭೂತ ಜ್ಞಾನ ಇಲ್ಲದವರು ಎಂದು ಕುಟುಕಿದರು.
ಹನುಮಂತ ಗುಲಾಮಗಿರಿಯ ಸಂಕೇತ ಎಂದು ಪ್ರೊ. ಮಹೇಶ್ಚಂದ್ರಗುರು, ಹನುಮ ಜಯಂತಿಯನ್ನೇ ಪ್ರಶ್ನೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯರ ಪ್ರಶ್ನೆಗೆ, ಇದು ನಾನು ಉತ್ತರ ಕೊಡಲು ಲಾಯಕ್ಕೇ ಇಲ್ಲದ ವಿಚಾರ. ಹಾಗಾಗಿ ಅಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.