ಮೈಸೂರು: ಕಡಿಮೆ ಬೆಲೆಯಲ್ಲಿ ಚಿನ್ನ ಕೊಡಿಸುವುದಾಗಿ ನಂಬಿಸಿ 23,50,000 ರೂ.ಹಣ ಪಡೆದು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಈ ಕುರಿತು ಶಂತ ಎಂಬುವವರು ವಿವಿ ಪುರಂ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಂತ ಅವರಿಗೆ ತಮ್ಮ ಸ್ನೇಹಿತ ಮಹಮ್ಮದ್ ಮೂಲಕ ಯೂಸಫ್ ಹಾಜಿ ಎಂಬಾತ ಪರಿಚಯವಾಗಿದ್ದು ಆತ ಆರ್ ಬಿಐ ಡೀಲರ್ ಎಂದು ಪರಿಚಯಿಸಿಕೊಂಡಿದ್ದ. ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿದ್ದ. ಲಾಡ್ಜ್ ನಲ್ಲಿ ಉಳಿದುಕೊಂಡಿದ್ದ ಅತ ಜನವರಿ ೩ ನೇ ತಾರೀಖಿನಂದು ರಾತ್ರಿ ಭೇಟಿಯಾಗಿ ಮರುದಿನ ಚಿನ್ನ ಕೊಡಿಸುವುದಾಗಿ ತಿಳಿಸಿದ್ದ.
ನಿನ್ನೆ ಬೆಳಿಗ್ಗೆ ವಿವಿ ಮೊಹಲ್ಲಾ ಟೆಂಪಲ್ ರಸ್ತೆಯಲ್ಲಿರುವ ಹೆಚ್.ಡಿ.ಎಫ್ ಸಿ ಬ್ಯಾಂಕ್ ಬಳಿ ಬರುವಂತೆ ತಿಳಿಸಿದ್ದು ನಾನು ಸ್ನೇಹಿತರೊಡಗೂಡಿ ಬ್ಯಾಂಕ್ ಬಳಿ ಬಂದಿದ್ದೆ. ಬ್ಯಾಂಕ್ ಎದುರು ಯೂಸಫ್ ಹಾಜಿ ಮೂರು ಕವರ್ ನೀಡಿ ಕೆಲವು ದಾಖಲಾತಿಗಳನ್ನು ಪಡೆದುಕೊಂಡು ಹೆಚ್ ಡಿಎಪ್ ಸಿ ಬ್ಯಾಂಕ್ ಒಳಗೆ ಹೋದರು. ಸ್ವಲ್ಪ ಸಮಯದಲ್ಲಿ ನನ್ನನ್ನು ಬ್ಯಾಂಕ್ ಒಳಗೆ ಕರೆಯಿಸಿ ಹಣದ ಡಿನಾಮಿನೇಷನ್ ಬರೆಯಬೇಕೆಂದು ನನ್ನ ಬ್ಯಾಗ್ ನಲ್ಲಿದ್ದ 23,50,000ರೂ,ಗಳನ್ನು ಪಡೆದು ಕೊಂಡಿದ್ದ, ಬ್ಯಾಂಕ್ ಹೊರಗಿದ್ದ ಮಹಮ್ಮದ್ ಬಳಿ ಪೇಪರ್ ತೆಗೆದುಕೊಂಡು ಬರುವಂತೆ ತಿಳಿಸಿದ್ದು, ಮಹಮ್ಮದ್ ಗೆ ನಾನು ಪೋನ್ ಮಾಡುವಷ್ಟರಲ್ಲಿ ಯೂಸಫ್ ಹಾಜಿ ಮತ್ತೊಂದು ಬಾಗಿಲಿನಿಂದ ಹಣದ ಸಮೇತ ಪರಾರಿಯಾಗಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು ಮುಂದಿನ ತನಿಖೆ ನಡೆಸುತಿದ್ದಾರೆ.