ಮೈಸೂರು: ಇಲ್ಲಿಗೆ ಸಮೀಪದ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಕರ್ತವ್ಯ ನಿರತ ಅರಣ್ಯ ವೀಕ್ಷಕರೊಬ್ಬರು ಸೋಮವಾರ ರಾತ್ರಿ ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ನಡೆದಿದೆ.
ಮೃತರನ್ನು ಸರಗೂರು ತಾಲ್ಲೂಕಿನ ನೆಟ್ಕಾಲ್ಹುಂಡಿ ಗ್ರಾಮದ ರವಿ (27) ಎಂದು ಗುರುತಿಸಲಾಗಿದ್ದು, ಇವರಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಅರಣ್ಯದೊಳಗೆ ಸೋಮವಾರ ರಾತ್ರಿ ಸೇವೆ ಸಲ್ಲಿಸುತ್ತಿದ್ದ ತನ್ನ ಪತಿ ಕಾಡಾನೆ ತುಳಿತಕ್ಕೆ ಬಲಿಯಾಗಿದ್ದಾರೆಂದು ರವಿ ಪತ್ನಿ ಅಂಬಿಕಾ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ರವಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ 8 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ರವಿ ಯು ಮೊಳೆಯೂರು ವಲಯ ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾತ್ರಿ ಪಾಳಿ ಕೆಲಸಕ್ಕೆ ಸೋಮವಾರ ಸಂಜೆ 5 ಗಂಟೆಗೆ ನೆಟ್ಕಾಲ್ಹುಂಡಿ ಗ್ರಾಮದ ಮನೆಯಿಂದ ಹೊರಟು ಕೆಲಸಕ್ಕೆ ಹಾಜರಾಗಿದ್ದರು. ರಾತ್ರಿ 8.30ರ ವೇಳೆ ಪತ್ನಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾನೆ. ಅಲ್ಲದೆ ಮಧ್ಯರಾತ್ರಿ 12ರ ವೇಳೆ ರವಿ ತನ್ನ ಭಾವನಿಗೂ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಅರಣ್ಯಾಧಿಕಾರಿಗಳ ಪ್ರಕಾರ ರವಿಯ ಮೇಲೆ ಕಾಡಾನೆ ಧಾಳಿ ನಡೆಸಿರುವ ಯಾವುದೇ ಕುರುಹು ಇಲ್ಲ , ಹಾಗಾಗಿ ಅರಣ್ಯಾಧಿಕಾರಿಗಳು ಅವರ ವಾದವನ್ನು ತಿರಸ್ಕರಿಸಿದ್ದಾರೆ.
ಆದರೆ, ಅರಣ್ಯಾಧಿಕಾರಿಗಳು ಪತಿಯ ಸಾವನ್ನು ಹೃದಯಾಘಾತವೆಂದು ಸುಳ್ಳು ಹೇಳುತ್ತಿದ್ದಾರೆ. ರವಿ ಅವರು ಆರೋಗ್ಯವಾಗಿದ್ದರು. ಮಂಗಳವಾರ ಮುಂಜಾನೆ ಕಾಡಾನೆ ದಾಳಿ ನಡೆಸಿ ತನ್ನ ಪತಿಯನ್ನು ಕೊಂದಿದೆ ಎಂದು ಪತ್ನಿ ಅಂಬಿಕಾ ಹೇಳುತಿದ್ದಾರೆ. ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ. ಈ ಕುರಿತು ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತಿದ್ದಾರೆ.