ಮೈಸೂರು: ಹತ್ತು ವರ್ಷದ ಬಾಲಕಿಯನ್ನು ಪುಸಲಾಯಿಸಿ ಫಾರಂ ಹೌಸ್ ನ ಮೆಷಿನ್ ರೂಂಗೆ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ತಿ.ನರಸೀಪುರ ತಾಲೂಕಿನ ಹಳೆಕೆಂಪಯ್ಯನಹುಂಡಿ ಗ್ರಾಮದಲ್ಲಿ ನಡೆದಿದ್ದು ಆರೋಪಿಯನ್ನು ಬಂಧಿಸಲಾಗಿದೆ.
ಇತ್ತೀಚೆಗಷ್ಟೆ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರದ ಪ್ರಕರಣ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಇದೀಗ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.
ಈ ಫಾರಂ ಹೌಸ್ ನಟರೊಬ್ಬರಿಗೆ ಸೇರಿದ್ದಾಗಿದ್ದು, ಇಲ್ಲಿ ಕೆಲಸ ಮಾಡಿಕೊಂಡಿದ್ದ ದಂಪತಿಯ 10 ವರ್ಷದ ಮಗಳ ಮೇಲೆ ಅಲ್ಲೇ ಕೆಲಸ ಮಾಡುತ್ತಿದ್ದ ಕಾಮುಕ ಅತ್ಯಾಚಾರ ಎಸಗಿದ್ದು ಘಟನೆ ನಡೆದು ಪೊಲೀಸರಿಗೆ ದೂರು ನೀಡುತ್ತಿದ್ದಂತೆಯೇ ಪೊಲೀಸರು ಕಾಮುಕನನ್ನು ಬಂಧಿಸಿದ್ದಾರೆ.
ಅತ್ಯಾಚಾರ ಎಸಗಿದ ಆರೋಪಿ ಬಿಹಾರ ಮೂಲದ ನಜೀಮ್ ಆಗಿದ್ದು, ಈತ ಕೂಡ ಅದೇ ಫಾರಂ ಹೌಸ್ ನಲ್ಲಿ ಕುದುರೆಗಳಿಗೆ ಲಾಳ ಹೊಡೆಯುವ ಕೆಲಸ ಮಾಡಿಕೊಂಡಿದ್ದನು. ಬಾಲಕಿಯ ತಾಯಿ ಮತ್ತು ತಂದೆ ಮೂಲತಃ ಶಿವಮೊಗ್ಗದವರಾಗಿದ್ದಾರೆ. ಬಾಲಕಿಯ ತಾಯಿಗೆ ಫಾರಂ ಹೌಸ್ ನ ಮ್ಯಾನೇಜರ್ ಗೆ ಟಿಕ್ ಟಾಕ್ ಮೂಲಕ ಪರಿಚಯವಾಗಿದ್ದು, ಅವರ ಮೂಲಕ ಫಾರಂ ಹೌಸ್ ನಲ್ಲಿ ಕೆಲಸ ಪಡೆದುಕೊಂಡಿದ್ದು, ಕಳೆದ ಒಂದು ವರ್ಷದಿಂದ ಗಂಡ ಹೆಂಡತಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.
ಬಾಲಕಿ ಕೊರೊನಾ ಕಾರಣ ಶಿವಮೊಗ್ಗದ ಶಾಲೆಯಿಂದ ವರ್ಗಾವಣೆ ಪತ್ರ ತರದ ಕಾರಣದಿಂದ ಶಾಲೆಗೆ ಸೇರಿಸಿರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಆಟವಾಡಿಕೊಂಡಿತ್ತು ಎನ್ನಲಾಗಿದೆ. ಈ ನಡುವೆ ಫಾರಂ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ನಜೀಮ್ ಬಾಲಕಿ ಒಬ್ಬಳೇ ಇರುವುದನ್ನು ಗಮನಿಸಿ ಕೆಲವು ದಿನಗಳ ಹಿಂದೆ ಆಕೆಯನ್ನು ಪುಸಲಾಯಿಸಿ ತೋಟದ ಮೆಷಿನ್ ರೂಂಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ತನ್ನ ರೂಮ್ ಗೆ ಕರೆದೊಯ್ದು ಅಲ್ಲಿಯೂ ಕಾಮತೃಷೆ ತೀರಿಸಿಕೊಂಡಿದ್ದಾನೆ. ಅಲ್ಲದೆ ವಿಷಯನ್ನು ಯಾರಿಗಾದರು ಹೇಳಿದರೆ ಸಾಯಿಸುವುದಾಗಿ ಬೆದರಿಸಿದ್ದಾನೆ.
ಸೆ.15ರಂದು ಬಾಲಕಿ ತನ್ನ ತಾಯಿಯೊಂದಿಗೆ ಅಳುತ್ತಾ ತನ್ನನ್ನು ಇಲ್ಲಿಂದ ಶಿವಮೊಗ್ಗಕ್ಕೆ ಕರೆದೊಯ್ಯುವಂತೆ ಹೇಳಿದ್ದಾಳೆ. ಈ ವೇಳೆ ತಾಯಿ ವಿಚಾರಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಳಿಕ ಘಟನೆಗೆ ಸಂಬಂಧಿಸಿದಂತೆ ತೋಟದ ಮ್ಯಾನೆಜರ್ ಗೆ ಮಾಹಿತಿ ನೀಡಿದ್ದು ಅವರು ಫಾರಂ ಹೌಸ್ ಗೆ ಬಂದು ವಿಚಾರಿಸಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಕಾಮುಕ ನಜೀಮ್ ನನ್ನು ಬಂಧಿಸಿದ್ದಾರೆ ಈ ಸಂಬಂಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ನಜೀಮ್ ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.