ಮೈಸೂರು: ಜಗತ್ತು ಸ್ಪರ್ಧಾತ್ಮಕವಾಗಿದ್ದು, ಆತ್ಮವಿಶ್ವಾಸ ಮತ್ತು ವಿಕಸನ ವೃದ್ದಿಸಿಕೊಳ್ಳಲು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸುವುದು ಅಗತ್ಯ ಎಂದು ಮೈವಿವಿ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ ಡೀನ್ ಪ್ರೊ. ಎಚ್.ಟಿ. ಬಸವರಾಜಪ್ಪ ಹೇಳಿದರು.
ನಗರದ ಜೆ.ಎಸ್. ಎಸ್. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗಾಗಿ ಸ್ನಾತಕ ಮತ್ತು ಸ್ನಾತಕೋತ್ತರ ರಾಸಾಯನ ಶಾಸ್ತ್ರ ವಿಭಾಗಗಳು ಐಕ್ಯೂಎಸಿ ಆಶ್ರಯದಲ್ಲಿ ಆಯೋಜಿಸಿದ್ದ ಜೆಎಸ್ಎಸ್ ಸೈನ್ಟಿಯಾ ಟಿ 20 ಉಪನ್ಯಾಸ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿ, ದಕ್ಷತೆಯಿಂದ ಬದುಕಬೇಕಾದರೆ ವಿದ್ಯಾರ್ಥಿಗಳು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಂಡು, ವಿಷಯದಲ್ಲಿ ಮಿತಿಯಿಲ್ಲದೆ ಕಲಿತು ಸಾಮರ್ಥ್ಯ ವೃದ್ದಿಸಿಳ್ಳಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.
ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಲು ಇಂದಿನ ದಿನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳೆರಡನ್ನು ಏಕೀಕರಣ ಗೊಳಿಸಬೇಕಾಗಿರುವುದು ಅನಿವಾರ್ಯವಾಗಿದೆ. ಕಾಲಕಾಲಕ್ಕೆ ಪ್ರಕೃತಿಯಲ್ಲಾಗುವ ಬದಲಾವಣೆಗಳನ್ನು ಉಲ್ಲೇಖಿಸಿದ ಅವರು, ಮನುಷ್ಯನ ಕಲಿಕೆಯಲ್ಲಿಯೂ ಆಗಬೇಕಾದ ಬದಲಾವಣೆಗಳ ಬಗ್ಗೆ ವಿವರಿಸಿದರು.
ವಿದ್ಯುತ್ ಬಲ್ಬ್ ಕಂಡುಹಿಡಿದ ಥಾಮಸ್ ಆಳ್ವ ಎಡಿಸನ್ ಆವಿಷ್ಕಾರದ ಸಮಯದಲ್ಲಿ ಅವರು ಎದುರಿಸಿದ ಸಮಸ್ಯೆಗಳನ್ನು ಸ್ಮರಿಸಿ ವಿದ್ಯಾರ್ಥಿಗಳು ಉತ್ಸಾಹದಿಂದ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕೆಂಬ ಸಲಹೆ ನೀಡಿದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ. ಬಿ.ವಿ ಸಾಂಬಶಿವಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಪ್ರೊ. ಎಮ್. ಪಿ. ವಿಜಯೇಂದ್ರ ಕುಮಾರ್, ರಾಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ವಿಜಯೇಂದ್ರ ಕುಮಾರ್, ಸಂಘಟನಾ ಕಾರ್ಯದರ್ಶಿ ಪ್ರಮೀಳಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ 34 ತಂಡಗಳು, 20 ಅಧ್ಯಾಪಕರುಗಳು ಹಾಗೂ 150 ವಿಧ್ಯಾರ್ಥಿಗಳು ಭಾಗವಹಿಸಿದ್ದರು.