ಹುಣಸೂರು: ಹಾಡ ಹಗಲೇ ಚಿರತೆಯೊಂದು ಜಾನುವಾರುಗಳ ಮೇಲೆ ದಾಳಿ ನಡೆಸಿದ ಘಟನೆ ಮುತ್ತುರಾಯನ ಹೊಸಹಳ್ಳಿ ಮೀಸಲು ಅರಣ್ಯ ಪ್ರದೇಶದಂಚಿನಲ್ಲಿ ನಡೆದಿದೆ.
ಹನಗೋಡು ಹೋಬಳಿ ಮುತ್ತುರಾಯನ ಹೊಸಹಳ್ಳಿ ಮೀಸಲು ಅರಣ್ಯ ಪ್ರದೇಶದ ಹುಣಸೇಗಾಲ ಹುಲ್ಲುಗಾವಲಿನಲ್ಲಿ ಗ್ರಾಮದ ನಾಗರಾಜೇಗೌಡರು ತಮ್ಮ ಜಾನುವಾರುಗಳನ್ನು ಮೇಯಲು ಬಿಟ್ಟಿದ್ದ ವೇಳೆ ಎರಡು ಹಸುಗಳ ಮೇಲೆ ಚಿರತೆದಾಳಿ ನಡೆಸಿದೆ. ದಾಳಿ ನಡೆಸಿದ ಪರಿಣಾಮ ಒಂದು ಹಸು ಮೃತಪಟ್ಟಿದ್ದು, ಮತ್ತೊಂದು ಹಸು ತೀವ್ರತರವಾಗಿ ಗಾಯಗೊಂಡಿದೆ. ಇನ್ನುಳಿದ ಜಾನುವಾರುಗಳು ಗಾಬರಿಗೊಂಡು ದಿಕ್ಕಪಾಲಾಗಿ ಓಡಿವೆ.
ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದು ಸ್ಥಳಕ್ಕೆ ಡಿಆರ್‌ಎಫ್‌ಒ ಅನುದೀಪ್ ಮತ್ತು ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮುತ್ತುರಾಯನ ಹೊಸಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಚಿರತೆಗಳು ಹೆಚ್ಚಾಗಿರುವುದರಿಂದ ಚಿರತೆ ದಾಳಿಯಿಂದ ಹಸು ಸತ್ತಿರಬಹುದೆಂದು ತಿಳಿಸಿದ್ದು ಹಸುವಿನ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.
ಪದೇ ಪದೇ ಮನುಷ್ಯರು ಮತ್ತು ಜಾನುವಾರುಗಳ ಮೇಲೆ ಕಾಡುಪ್ರಾಣಿಗಳು ಆಗಿಂದ್ದಾಗ್ಗೆ ದಾಳಿ ಮಾಡುತ್ತಿರುವುದರ ಇಲ್ಲಿ ಜನಜೀವನ ಭಯದಲ್ಲಿ ಬದುಕುವಂತಾಗಿದೆ ಎಂದು ಬಗ್ಗೆ ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುತ್ತುರಾಯನ ಹೊಸಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿ ದಾಳಿ ನಡೆಸಿದೆ ಎಂದು ಗ್ರಾಮಸ್ಥರು ಆರೋಪಿಸಿದರೆ ಅರಣ್ಯ ಇಲಾಖೆಯವರು ಹುಲಿ ದಾಳಿಯ ಕುರುಹುಗಳು ಪತ್ತೆಯಾಗದೇ ಇರುವುದರಿಂದ ಇದು ಚಿರತೆ ದಾಳಿ ಎಂದು ಮಾಹಿತಿ ನೀಡಿದ್ದಾರೆ.