ಮೈಸೂರು: ಕೃಷಿ ಉತ್ಪನ್ನಗಳ ಎಂಎಸ್‌ಪಿ ಖಾತರಿಗಾಗಿ ಪ್ರಧಾನಿ ಗಮನಸೆಳೆಯಲು ಜೂ.20ರಂದು ದೇಶದ ಕರ್ಮಯೋಗಿಗಳ ರೈತ ಕಾಯಕ ದಿನ ಆಚರಿಸಲಾಗುವುದು ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖಾತರಿಗಾಗಿ ಕಾನೂನು ರೂಪಿಸುವಂತೆ ಪ್ರಧಾನಿ ನರೇಂದ್ರಮೋದಿ ಗಮನಸೆಳೆಯಲು ರೈತರ ಉತ್ಪನ್ನಗಳನ್ನು ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಯ ಮುಂಭಾಗದ ರಸ್ತೆಯಲ್ಲಿ ಕೃಷಿ ಉತ್ಪನ್ನಗಳನ್ನು ಮಾರುವ ಮೂಲಕ ರಾಜ್ಯಾದ್ಯಂತ ರೈತ ಸಂಘಟನೆಗಳು ಕರ್ಮಯೋಗಿಗಳು, ರೈತ ಕಾಯಕ ದಿನ ಆಚರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಧಾನಿ ಮೋದಿ ಅಧಿಕಾರಕ್ಕೆ ಬರುವ ಮೊದಲು ಸ್ವಾಮಿನಾಥನ್ ವರದಿ ಜಾರಿಗೆ ತರುವ ಭರವಸೆ ನೀಡಿ ಹಾಗೂ 2022ಕ್ಕೆ ರೈತರ ಆದಾಯ ದ್ವಿಗುಣ ಮಾಡುವ ಭರವಸೆ ನೀಡಿ ಹುಸಿಗೊಳಿಸಿದ್ದಾರೆ. ಇನ್ನಾದರೂ ರೈತರಿಗೆ ಖಾತರಿ ಬೆಲೆ ಸಿಗುವಂತಹ ಕಾನೂನು ರಚಿಸಲಿ ಎಂದು ಒತ್ತಾಯಿಸಲಾಗುವುದು ಎಂದರು.
ಕೃಷಿ ಸಾಲ ನೀಡಲು ಬ್ಯಾಂಕುಗಳು ರೈತರ, ಸಿಬಿಲ್ ಸ್ಕೋರ್ ಕೇಳುತ್ತಿದ್ದಾರೆ. ಅತಿವೃಷ್ಟಿ ಅನಾವೃಷ್ಟಿ ಬೆಳೆ ಹಾನಿಯಾದ ರೈತರು ಸಕಾಲಕ್ಕೆ ಸಾಲ ತುಂಬಲು ಹೇಗೆ ಸಾಧ್ಯ? ಎನ್ನುವುದನ್ನು ಆರಿಯದೇ ರೈತರಿಗೆ ಮಾರಕವಾಗುವ ನೀತಿಗಳನ್ನು ರೂಪಿಸಿದ್ದಾರೆ. ದೇಶ ಬಿಟ್ಟು ಓಡಿ ಹೋಗುವ ಬಂಡವಾಳಶಾಹಿಗಳಿಗೆ ಲಕ್ಷಾಂತರ ಕೋಟಿ ಸಾಲ ನೀಡುವ ಬ್ಯಾಂಕುಗಳು ರೈತರನ್ನು ಗುಲಾಮರಂತೆ ನೋಡುತ್ತಿದ್ದಾರೆ. 10 ದಿನದಲ್ಲಿ ನೀತಿ ರದ್ದುಗೊಳಿಸಿದ್ದಾರೆ. ರಾಜ್ಯದ ರೈತರು ಬೆಂಗಳೂರು, ಆರ್‌ಬಿಐ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಬೆಳೆ ವಿಮಾ ಕಂಪನಿಗಳು ರೈತರಿಗೆ ಟೋಪಿ ಹಾಕುತ್ತಿವೆ. ಕಳೆದ ವರ್ಷದ ಪರಿಹಾರ 200 ಕೋಟಿ ಬಾಕಿ ಉಳಿಸಿಕೊಂಡು, ಬೆಳೆ ವಿಮೆ ಹಣ ತುಂಬುವಂತೆ ರೈತರಿಗೆ ಕರೆ ಕೊಡುತ್ತಾರೆ. ಬೆಳೆ ವಿಮಾ ನೀತಿಯೇ ಸರಿ ಇಲ್ಲ, ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಪ್ರಸಕ್ತ ಸಾಲಿಗೆ ಉತ್ತರಪ್ರದೇಶದಲ್ಲಿ ನೀಡುವಂತೆ ಕಬ್ಬಿಗೆ ಕನಿಷ್ಠ 3500 ರೂ ಬೆಲೆ ನಿಗದಿ ಮಾಡಬೇಕೆಂದು, ಇದೆ ಜೂ.9ರಂದು ನಡೆದ ಸರಕಾರದ ಸಕ್ಕರೆ ಮಂತ್ರಿಗಳ ಅಧ್ಯಕ್ಷತೆಯ ಕಬ್ಬು ಖರೀದಿ ಮಂಡಳಿ ಸಭೆಯಲ್ಲಿ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅತ್ತಹಳ್ಳಿ ದೇವರಾಜ, ಹಳ್ಳಿಕೆರೆಹುಂಡಿ ಭಾಗ್ಯರಾಜ, ಕಿರಗಸೂರು ಶಂಕರ, ಲಕ್ಷ್ಮಿಪುರ ವೆಂಕಟೇಶ್, ಬರಡನಪುರ ನಾಗರಾಜ್ ಹಾಜರಿದ್ದರು.