ಮೈಸೂರು: ಹುಣಸೂರಿನ ಹನಗೋಡು ಹೋಬಳಿಯ ಹೆಗ್ಗಂದೂರು ಗ್ರಾಮದಲ್ಲಿ ಲಕ್ಷ್ಮಣತೀರ್ಥ ನದಿಯಲ್ಲಿ ಈಜಲು ಹೋದ ಇಬ್ಬರು ಮುಳುಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ಹೆಗ್ಗಂದೂರು ಗ್ರಾಮದ ರಮೇಶ್ ರಾವ್ ರವರ ಪುತ್ರ ಶರತ್ ರಾವ್ (17) ಮತ್ತು ಪುಟ್ಟೇಗೌಡರ ಪುತ್ರ ಶಿವಕುಮಾರ್(17) ನೀರಿನಲ್ಲಿ ಮುಳುಗಿ ಮೃತಪಟ್ಟವರು. ಇವರಿಬ್ಬರು ಶುಕ್ರವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಸಮಯದಲ್ಲಿ ಲಕ್ಷ್ಮಣ ತೀರ್ಥಹಳ್ಳಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಮೃತರು ಹನಗೋಡು ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದರು. ವಿಷಯ ತಿಳಿದು ಘಟನಾ ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಠಾಣೆಯ ಪೊಲೀಸ್ ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿದ್ದು, ಶಿವಕುಮಾರ್ ಮೃತದೇಹವನ್ನು ಮಾತ್ರ ಹೊರತೆಗೆದಿದ್ದು, ಕತ್ತಲಾಗಿದ್ದರಿಂದ ಶರತ್ ರಾವ್ ಮೃತದೇಹವನ್ನು ಹೊರ ತೆಗೆಯಲು ಸಾಧ್ಯವಾಗಲಿಲ್ಲ. ನಾಳೆ ಕಾರ್ಯಾಚರಣೆಯನ್ನು ಮುಂದುವರೆಸಲಾಗಿದೆ.