ಮೈಸೂರು: ಈಗಾಗಲೇ ಜೆಡಿಎಸ್‌ನಿಂದ ದೂರ ಉಳಿದಿರುವ ಶಾಸಕ ಜಿ.ಟಿ.ದೇವೇಗೌಡರು, ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಎರಡು ತಿಂಗಳಲ್ಲಿ ತಿಳಿಸುವುದಾಗಿ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಶಾಸಕ ಜಿ.ಟಿ ದೇವೇಗೌಡ, ಕಾರ್ಯಕರ್ತರು, ಬೆಂಬಲಿಗರು, ಕ್ಷೇತ್ರದ ಜನತೆ ಅಭಿಪ್ರಾಯದಂತೆ ಮುಂದಿನ ತೀರ್ಮಾನ ಮಾಡುತ್ತೇನೆ ಕಾರ್ಯಕರ್ತರ ಸಭೆ ನಡೆಸಿ ಎಲ್ಲಾ ವಿಚಾರವನ್ನು ಸಭೆಯಲ್ಲಿ ಹೇಳುತ್ತೇನೆ. ನನ್ನ ನಡೆ ಕಾರ್ಯಕರ್ತರ ಅಭಿಪ್ರಾಯದಂತೆ ಇರುತ್ತೆ. ಅವರು ಏನು ತೀರ್ಮಾನ ಮಾಡ್ತಾರೊ ಅದೇ ರೀತಿ ಮುಂದುವರೆಯುತ್ತೇನೆ ಎಂದಿದ್ದಾರೆ.
ಶಾಸಕ ಸಾ.ರಾ.ಮಹೇಶ್‌ಗೆ ರಾಜ್ಯದ ನಾಯಕಾರಾಗುವ ಎಲ್ಲಾ ಅರ್ಹತೆ ಇದೆ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಜಿ.ಟಿ.ದೇವೇಗೌಡ, ನಾನು ಈ ಹಿಂದೆಯೇ ಹೇಳಿದ್ದೆ. ಸಾ.ರಾ.ಮಹೇಶ್ ಯುವಕರಾಗಿದ್ದಾರೆ. ಈಗಾಗಲೆ ಸಚಿವನಾಗಿ ರಾಜ್ಯ ಮಟ್ಟದ ನಾಯಕರಾಗಿದ್ದಾರೆ. ನಾಯಕತ್ವ ವಹಿಸೋದು ತಪ್ಪೇನಿಲ್ಲ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು ಭೇಟಿಯಾದ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಿ.ಟಿ ದೇವೇಗೌಡ ಪ್ರಧಾನಿಯವರ ಆಗಮನ ನಮಗೆ ಖುಷಿ ತಂದಿದೆ. ಈ ಸಂದರ್ಭದಲ್ಲಿ ಮೈಸೂರಿನ ಅಭಿವೃದ್ಧಿ ಬಗ್ಗೆ ಮನವಿ ಮಾಡಲಾಗಿದೆ. ಮೈಸೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುದಾನ ನೀಡುವಂತೆ ಮನವಿ ಮಾಡಿದ್ದೇನೆ. ಹಣದ ಕೊರತೆ ಬಗ್ಗೆ ನಿಗವಹಿಸುವ ಬಗ್ಗೆ ಮನವಿ ಮಾಡಿದ್ದೇನೆ. ನನ್ನ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ. ನನ್ನ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ. ಪ್ರಧಾನ ಮಂತ್ರಿಗಳು ಎಲ್ಲರಿಗೂ ಪ್ರಧಾನ ಮಂತ್ರಿಗಳೇ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕನಾಗಿ ಅವರಿಗೆ ಸ್ವಾಗತ ಕೋರಿದ್ದೇನೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ತಿಳಿಸಿದರು.