ಮೈಸೂರು: ಕೇಂದ್ರ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ವರುಣ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ವರುಣ ಗ್ರಾಮದಲ್ಲಿ ತಿ.ನರಸೀಪುರ ಮೈಸೂರು ಮುಖ್ಯರಸ್ತೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಮಾತನಾಡಿ, ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಸಮರ್ಪಕ ಉದ್ಯೋಗ ಯೋಜನೆಯನ್ನು ದೊರಕಿಸಿ ಕೊಡದೆ ಕೇವಲ ಗುತ್ತಿಗೆ ಆಧಾರದ ಮೇಲೆ ಸೇನೆಗೆ ಸೇರಲು ಬಯಸುವ ಯುವಕರಿಗೆ ಅಗ್ನಿಪಥ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಘೋಷಣೆ ಮಾಡಿದೆ. ಆದರೆ ಯೋಜನೆಯಿಂದ ಯುವಜನತೆಗೆ ಯಾವುದು ರೀತಿಯಲ್ಲೂ ಅನುಕೂಲವಾಗುವುದಿಲ್ಲ ಸೇನೆಯಲ್ಲಿ ಸೇರುವ ಯುವಕರಿಗೆ ಸರಿಯಾದ ರೀತಿಯ ಸೌಲಭ್ಯ ಸಹ ದೊರಕುವುದಿಲ್ಲ ಎಂದರು.
ಈ ಯೋಜನೆಯನ್ನು ವಾಪಸು ಪಡೆಯುವಂತೆ ಒತ್ತಾಯಿಸಿ ಯುವಕರು ಉತ್ತರಪ್ರದೇಶ, ಬಿಹಾರ್ ಸೇರಿದಂತೆ ಮುಂತಾದ ರಾಜ್ಯಗಳಲ್ಲಿ ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಅದೇ ರೀತಿ ನಮ್ಮ ಕಾಂಗ್ರೆಸ್ ಪಕ್ಷ ಯುವಕರ ಹೋರಾಟಕ್ಕೆ ಸದಾ ಬೆಂಬಲವಾಗಿದ್ದು ದೇಶರಕ್ಷಣೆಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದ್ದು ಈ ಅಗ್ನಿಪಥ್ ಯೋಜನೆಯನ್ನು ಕೈ ಬಿಡುವ ತನಕ ಹೋರಾಟ ಮಾಡೋಣ ಪ್ರತಿ ಹಳ್ಳಿಯ ಮನೆಮನೆಗೂ ಬಿಜೆಪಿ ಸರ್ಕಾರದ ಕುತಂತ್ರವನ್ನು ಅವರ ಜನವಿರೋಧಿ ನೀತಿಗಳನ್ನು ತಿಳಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಿಳಿಸುವ ಮೂಲಕ ಸುಳ್ಳು ಭರವಸೆಗಳನ್ನು ಹೇಳುವ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸೋಣ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ವರುಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕೆ ಮುದ್ದೆಗೌಡ, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿಎಂ ರಾಮು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಂಜುಳಾ ಮಂಜುನಾಥ, ಪುರಸಭೆ ಮಾಜಿ ಅಧ್ಯಕ್ಷ ಸೋಮಣ್ಣ, ತಾಲೂಕು ಕುರುಬ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಮೈಸೂರು ಗ್ರಾಮಾಂತರ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.