ಮೈಸೂರು: ಮೈಸೂರು ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಕೆಲವೆಡೆ ರೈತರು ಭತ್ತಬೆಳೆದಿದ್ದು ಕಟಾವಿಗೆ ಬಂದಿತ್ತು. ಇದೀಗ ಗದ್ದೆಗೆ ನೀರು ನುಗ್ಗಿದ ಪರಿಣಾಮ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದ ಹುಲ್ಲಹಳ್ಳಿ ಹೋಬಳಿಯ ಚಂದ್ರವಾಡಿ ಗ್ರಾಮದಲ್ಲಿ ಸುಮಾರು ನಾಲ್ಕೈದು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದ್ದು, ಕಟಾವಿಗೆ ಬಂದಿತ್ತು. ಆದರೆ ಮಳೆಯಿಂದ ನುಗು ಹೊಳೆಯಿಂದ ಹರಿದು ಬಂದ ಅಧಿಕ ಪ್ರಮಾಣದ ನೀರು ಭತ್ತದ ಗದ್ದೆಗೆ ನುಗ್ಗಿದ ಪರಿಣಾಮ ಭತ್ತದ ಬೆಳೆ ನಾಶವಾಗಿದೆ. ಜತೆಗೆ ಇತರೆ ಬೆಳೆಗಳು ಕೂಡ ನಾಶವಾಗಿವೆ.
ಸದ್ಯ ಕೃಷಿಯನ್ನೇ ನಂಬಿ ಬದುಕುತ್ತಿದ್ದ ಚಂದ್ರವಾಡಿ ಗ್ರಾಮದ ರೈತರಾದ ತಿಮ್ಮಶೆಟ್ಟಿ, ರಂಗಸ್ವಾಮಿ, ಮಹೇಶ ಎಂಬುವರಿಗೆ ಸೇರಿದ ಭತ್ತದ ಗದ್ದೆಯು ನೀರಿನಿಂದ ಮುಳುಗಡೆ ಗೊಂಡಿದೆ ಇದರಿಂದ ಇದರಿಂದ ಲಕ್ಷಾಂತರ ರೂ ನಷ್ಟ ಅನುಭವಿಸುವಂತಾಗಿದೆ. ಹುಲ್ಲಹಳ್ಳಿ ಸುತ್ತ ಮುತ್ತ ಕೆಲವು ದಿನಗಳಿಂದ ಸುರಿಯತ್ತಿರುವ ಮಳೆಯಿಂದ ರೈತರು ಬೆಳೆದಂತಹ ಅಪಾರ ಪ್ರಮಾಣಸ ಕಬ್ಬು, ಹತ್ತಿ. ಭತ್ತ ಮುಂತಾದ ಬೆಳೆಗಳು ನಾಶವಾಗಿವೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಆಗಮಿಸಿ ನಷ್ಟವಾದ ಬೆಳೆಗಳಿಗೆ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ. ಸದ್ಯ ಮಳೆ ಹೆಚ್ಚಾದ ಪರಿಣಾಮ ಸಂಕಷ್ಟ ಎದುರಾಗಿದ್ದು, ಕೃಷಿ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ರೈತರಿದ್ದಾರೆ.