ಮೈಸೂರು: ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸ್ ನಿಲ್ದಾಣದ ಮೇಲೆ ನಿರ್ಮಿಸಿರುವ ಗುಂಬಜ್ ಗೆ ಸಂಬಂಧಿಸಿದಂತೆ ವಿವಾದ ಎದ್ದಿದ್ದು ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಅವರು ಪಾರಂಪರಿಕ ದೃಷ್ಟಿಯಿಂದ ನಿರ್ಮಿಸಲಾಗಿದೆ ವಿನಃ ಧರ್ಮದ ಆಧಾರದಲ್ಲಿ ಅಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಮೈಸೂರು ನಗರ ಪಾರಂಪರಿಕ ನಗರಿಯಾಗಿರುವುದರಿಂದ ಇದರ ಮಹತ್ವ ಸಾರುವ ಉದ್ದೇಶದಿಂದ ಕೆ.ಆರ್.ಕ್ಷೇತ್ರದ 54ನೇ ವಾರ್ಡ್‍ನ ಬೆಂಗಳೂರು ನೀಲಗಿರಿ (ಊಟಿ) ರಸ್ತೆಯಲ್ಲಿ ಶಾಸಕರ ನಿಧಿಯಿಂದ 10 ಲಕ್ಷ ರೂ ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಶೇ.60ರಷ್ಟು ಕಾಮಗಾರಿ ಮುಗಿದಿದೆ. ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.
ಮೈಸೂರಿನ ಪಾರಂಪರಿಕತೆಯನ್ನು ತೋರಿಸುವ ದೃಷ್ಟಿಯಲ್ಲಿ ಅರಮನೆಯಲ್ಲಿರುವ ಮಾದರಿಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಮಸೀದಿ ರೀತಿಯಲ್ಲಿ ತಂಗುದಾಣವನ್ನು ನಿರ್ಮಿಸಲಾಗುತ್ತಿದೆ ಎಂಬ ಸುದ್ದಿಯನ್ನು ಹರಡಲಾಗುತ್ತಿದೆ. ಇದರ ಗುತ್ತಿಗೆದಾರ ಮುಸ್ಲಿಂ ವ್ಯಕ್ತಿ ಅಲ್ಲ. ದಂತಿ ಕನ್ ಸ್ಟ್ರಕ್ಷನ್ ಹೆಸರಿನಲ್ಲಿ ಮಹದೇವ್ ಎಂಬುವವರು ನಿರ್ಮಿಸುತ್ತಿದ್ದಾರೆ. ಈ ತಂಗುದಾಣಗಳಲ್ಲಿ ಎಲ್ ಇಡಿ ಸ್ಟ್ರೀನ್ ಅಳವಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಾಗುವುದು.
ಕಾಮಗಾರಿ ಹಂತಹಂತವಾಗಿ ನಡೆಯುತ್ತಿದೆ. ಸಂಸದರ ಹೇಳಿಕೆ ಬಳಿಕ ರಾತ್ರೋರಾತ್ರಿ ಕಳಸ ಅಳವಡಿಸಲಾಗಿದೆ ಎಂಬ ಸುದ್ದಿಗಳು ಸುಳ್ಳು. ಇದನ್ನು ವಾರದ ಹಿಂದೆಯೇ ನಿರ್ಮಿಸಲಾಗಿದೆ. ಮೈಸೂರಿನ ಹಲವಾರು ಕಡೆಗಳಲ್ಲಿ ಇಂತಹ ತಂಗುದಾಣವನ್ನು ನಿರ್ಮಿಸಲಾಗಿದೆ. ಈ ವಿನ್ಯಾಸಗಳಿಂದ ವಿವಾದವಾಗಿದೆ ಎನ್ನುವುದಾದರೆ ತಜ್ಞರ ಸಮಿತಿ ರಚನೆ ಮಾಡಿ ಅವರು ವರದಿ ನೀಡಲಿ ಎಂದು ಮನವಿ ಮಾಡಿದ್ದಾರೆ. ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವವರ ವಿರುದ್ಧ ಹರಿಹಾಯ್ದಿದ್ದಾರೆ.