ತಿ.ನರಸೀಪುರ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಮುಖಂಡರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಕಪ್ಪು ಬಟ್ಟೆ ಕಟ್ಟಿಕೊಂಡು ರೈತ ಮುಖಂಡರು ಪ್ರತಿಭಟನೆ ನಡೆಸಿದರು.
ಪಟ್ಟದ ಮಿನಿ ವಿಧಾನಸೌಧ ಉದ್ಯಾನವನದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಶಾಖೆ ರೈತ ಮುಖಂಡರು ಸರ್ಕಾರದ ರೈತ ವಿರೋಧಿ ನೀತಿಯನ್ನು ವಿರೋಧಿಸಿ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್ ಎಫ್ ಆರ್ ಪಿ.ಯನ್ನು ಪುನರ್ ಪರಿಶೀಲನೆ ಹಾಗೂ ಕಬ್ಬಿಗೆ 3500 ರಿಂದ 4000 ಸಾವಿರದವರೆಗೆ ಬೆಂಬಲ ಬೆಲೆ ನೀಡಬೇಕು, ಹಾಗೂ ಉತ್ತರ ಪ್ರದೇಶ, ಗುಜರಾತ್, ಪಂಜಾಬ್ ಸರ್ಕಾರಗಳು ಅಲ್ಲಿನ ರೈತರಿಗೆ ನೀಡುತ್ತಿರುವ ಕಬ್ಬಿನ ಬೆಂಬಲ ಬೆಲೆಯನ್ನು ರಾಜ್ಯ ಸರ್ಕಾರವು ನೀಡಬೇಕೆಂದು ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಆಹೋರಾತ್ರಿ. ಪ್ರತಿಭಟನೆ ನಡೆಸುತ್ತಿದ್ದ ರಾಜ್ಯ ಕಬ್ಬು ಬೆಳೆಗಾರ ಸಂಘದ ಮುಖಂಡರನ್ನು ಪೊಲೀಸರು ಬಂಧಿಸುವ ಮೂಲಕ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಸಂವಿಧಾನ ಸಮರ್ಪಣ ದಿನದಂದೇ ಸರ್ಕಾರ ರೈತರನ್ನು ಬಂಧಿಸುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ಅಪಮಾನ ಮಾಡಿ ಪ್ರಜಾ ಪ್ರಭುತ್ವವನ್ನು ಬುಡಮೇಲು ಮಾಡಲು ಬಿಜೆಪಿ ಸರಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಕಬ್ಬು ಮತ್ತು ಭತ್ತದ ಬೆಳೆಗೆ ಸರ್ಕಾರ ಕೂಡಲೇ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಇಲ್ಲದಿದ್ದರೆ ರಾಜದಾದ್ಯಂತ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠವನ್ನು ಕಲಿಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದೇಶ್, ಪರಶುಮೂರ್ತಿ, ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಟೌನ್ ಅಧ್ಯಕ್ಷ ಅಪ್ಪಣ್ಣ, ತರಕಾರಿ ನಿಂಗರಾಜು,ಕುಮಾರ,. ಯೋಗೇಶ್, ರಾಜಶೇಖರ ಮತ್ತಿತರರು ಹಾಜರಿದ್ದರು.