ಆಲೂರು: ಜೇನು ಕೃಷಿ ಮಾಡುವುದರಿಂದ ಹೆಚ್ಚು ಆದಾಯ ಗಳಿಸಬಹುದು ಎಂದು ಜೇನು ಕೃಷಿ ತಜ್ಞ ಶಾಂತವೀರಯ್ಯ ತಿಳಿಸಿದರು.
ಕಸಬಾ ಭರತವಳ್ಳಿ ಸಮೀಪವಿರುವ ಪುಣ್ಯಭೂಮಿ ಸಂಸ್ಥೆ ಅವರಣದಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್, ಕೃಷಿ ಇಲಾಖೆ ಆಲೂರು, ಕಂದಲಿ ಕೃಷಿ ವಿಜ್ಞಾನ ಕೇಂದ್ರ ನಡೆದ ಜೈವಿಕ ಕೃಷಿ ಮೇಳದಲ್ಲಿ ಭಾಗವಹಿಸಿ ಮಾತನಾಡಿ, ಜೇನು ಸಾಕಾಣಿಕೆ ಪರಿಸರಕ್ಕೆ ಹಿತವಾದದು. ಮಾನವ ಸಮಾಜಕ್ಕೂ ಒಳ್ಳೆಯದು. ಜೇನುನೊಣಗಳಿಂದ ಪರಾಗ ಸ್ಪರ್ಷವಾಗುತ್ತದೆ. ಜೇನು ತುಪ್ಪ ಬಳಸುವುದರಿಂದ ಅನೇಕ ರೋಗಗಳಿಂದ ದೂರ ಉಳಿಯಬಹುದು. ಪ್ರತಿಯೊಬ್ಬ ರೈತರು ತಮ್ಮ ಮನೆಯಲ್ಲಿ ಜೇನು ಸಾಕಣೆ ಮಾಡಿ ಕುಟುಂಬದ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಸೋಮವಾರಪೇಟೆ ತಾಲ್ಲೂಕು ಅಬ್ಬೂರುಕಟ್ಟೆ ಕ್ಯಾಲಿಸ್ಟ ಡಿ. ಸಿಲ್ವ ರವರು ಮಾತನಾಡಿ, ಪರಿಸರ ಪ್ರಿಯತತ್ವಗಳನ್ನು ಮಲೆನಾಡು ಭಾಗದಲ್ಲೂ ಅಳವಡಿಸಿಕೊಳ್ಳಬಹುದು. ವಿಷಪೂರಿತ ಆಹಾರ ಸೇವನೆಯಿಂದ ಇತ್ತೀಚೆಗೆ ಪಟ್ಟಣವಲ್ಲದೆ ಹಳ್ಳಿಗಳಲ್ಲೂ ಕ್ಯಾನ್ಸರ್ನಂತಹ ಮಾರಣಾಂತಿಕ ಕಾಯಿಲೆಗಳು ಹೆಚ್ಚಾಗುತ್ತಿದೆ. ಜೈವಿಕ, ಸಾವಯವ ಕೃಷಿ ಉತ್ಪನ್ನಗಳನ್ನು ಬಳಸುವುದರಿಂದ ರೋಗಮುಕ್ತರಾಗಿ ಬದುಕಬಹುದಲ್ಲದೆ ಅನವಶ್ಯಕ ವೆಚ್ಚ ತಪ್ಪಿಸಬಹುದು ಎಂದರು.
ಸಂಸ್ಥೆ ಮುಖ್ಯಸ್ಥ ಡಾ. ವಿಜಯ ಅಂಗಡಿ ಮಾತನಾಡಿ, ೨೦೦೪ ರಲ್ಲಿ ಪುಣ್ಯಭೂಮಿ ಸಂಸ್ಥೆ ಪ್ರಾರಂಭವಾಯಿತು. ೧೯೯೬ ರಿಂದ ರೈತರಲ್ಲಿ, ಸಾರ್ವಜನಿಕರಲ್ಲಿ ಪರಿಸರ ಪ್ರಿಯ ಕೃಷಿ ತತ್ವಗಳನ್ನು ಮೂಡಿಸಲು ಹಲವು ಕಾರ್ಯಕ್ರಮ, ಪ್ರವಾಸ, ಪ್ರಕಟಣೆ ಹೊರತರಲಾಯಿತು ಎಂದರು.
ಹಾಸನ ತಾ. ಗೌಡಗೆರೆ ಯುವ ಕೃಷಿಕ ಶ್ರೀರಾಮ್., ಸೋಮವಾರಪೇಟೆ ತಾಲ್ಲೂಕು ಹನ್ನಲಿ ಗ್ರಾಮದ ಯುವ ಕೃಷಿಕ ಪ್ರದೀಪ್ ಕುಮಾರ್ ರವರಿಗೆ ಪುಣ್ಯಭೂಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಸಂಸ್ಥೆ ಗೌರವಾಧ್ಯಕ್ಷ ಗಿಡ್ಡೇಗೌಡ, ಸತೀಶ್, ದಯಾನಂದ, ಸಿದ್ದಲಿಂಗೇಶ್ವರ್ ಹಾಜರಿದ್ದರು.ಜೈವಿಕ ಕೃಷಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ನೆರೆದಿದ್ದವರಿಗೆ ವಿಶೇಷವಾಗಿ ದೇಶೀಯ ಜೈವಿಕ ಆಹಾರ(ಹಣ್ಣು, ಮೊಳಕೆ ಕಾಳು) ವನ್ನು ಉಣ ಬಡಿಸಲಾಯಿತು.