ಮೈಸೂರು: ಕ್ಷೇತ್ರದ ಜನತೆ ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ಕಂಡಿದ್ದೀರಿ. ಈ ಬಾರಿ ನನಗೆ ಅವಕಾಶ ಮಾಡಿಕೊಡಿ. ಕಳೆದೆರಡು ದಶಕಗಳಿಂದಲೂ ಬಗೆಹರಿಯದ ಇಲ್ಲಿನ ಸಮಸ್ಯೆಗಳನ್ನು ನಿವಾರಿಸುತ್ತೇನೆ ಎಂದು ಕೆ.ಆರ್. ಕ್ಷೇತ್ರದ ಜಾ.ದಳ ಅಭ್ಯರ್ಥಿ ಕೆ.ವಿ.ಮಲ್ಲೇಶ್ ಭರವಸೆ ನೀಡಿದರು.
ಮಂಗಳವಾರ ಕೆ.ಆರ್.ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆಗು ಮುನ್ನ ನಗರದ ನೂರೊಂದು ಗಣಪತಿ ದೇಗುಲದಲ್ಲಿ ಪೂಜೆ ಸಲ್ಲಿಸಿ ಮಾತನಾಡಿ, ಕೆ.ಆರ್. ಕ್ಷೇತ್ರದಲ್ಲಿ ಈವರೆಗೂ ಅಧಿಕಾರ ಅನುಭವಿಸಿದ ಕಾಂಗ್ರೆಸ್ ಹಾಗೂ ಬಿಜೆಪಿಯ ಶಾಸಕರು ಪ್ರತಿ ಚುನಾವಣೆಯಲ್ಲೂ ಅದೇ ಹಳೇ ಭರವಸೆಗಳನ್ನೂ ನೀಡುತ್ತಾ ಬಂದಿದ್ದಾರೆ. ಅಧಿಕಾರ ಬಂದ ಮೇಲೆ ಭರವಸೆಗಳು ಭರವಸೆಯಾಗಿಯೇ ಉಳಿಯುತ್ತಿವೆ ಎಂದು ಹೇಳಿದರು. ಇನ್ನು ರಾಜ್ಯ, ದೇಶದಲ್ಲೂ ಯುವಕರಲ್ಲಿ ಕೋಮು ವೈಷಮ್ಯದ ವಿಷಬೀಜ ಬಿತ್ತುವ ಮೂಲಕ ಅಶಾಂತಿಯ ವಾತಾವರಣ ಮೂಡಿಸಿದ್ದಾರೆ. ಇಂತಹ ಪಕ್ಷಗಳು ಎಂದಿಗೂ ಮಾರಕ. ಪ್ರಾದೇಶಿಕ ಪಕ್ಷ ಜೆಡಿಎಸ್‌ಗೆ ಒಮ್ಮೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಸರ್ವಜನರ ಅಭಿವೃದ್ಧಿ ಕೇಂದ್ರಿತವಾದ ಪಂಚರತ್ನ ಯೋಜನೆಯಿಂದ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ, ಹೈಟೆಕ್ ಶಾಲೆ, ಸೂರಿಲ್ಲದವರಿಗೆ ಆಶ್ರಯ, ಯುವ ಜನತೆಗೆ ನವಮಾರ್ಗ, ಮಹಿಳೆಯರ ಸಬಲೀಕರಣ ಕಾರ್ಯಕ್ರಮಗಳಿಂದ ಕೆ.ಆರ್.ಕ್ಷೇತ್ರವನ್ನು ಮಾದರಿ ಮಾಡಲಾಗುವುದು ಎಂದರು.
ನಗರ ಪಾಲಿಕೆಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ವಿಧಾನಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿಪಂ ಮಾಜಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಜೆಡಿಎಸ್ ಯುವ ಮುಖಂಡ ಅಮ್ಮ ಸಂತೋಷ್, ವಕೀಲ ಮಹದೇವ ಪ್ರಸಾದ್ ಸಾಥ್ ನೀಡಿದರು.
ಬೆಳಗ್ಗೆ 10 ಗಂಟೆಗೆ ನೂರೊಂದು ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಅಗ್ರಹಾರ ವೃತ್ತದ ಮೂಲಕ ಸಾಗಿ ಪಾಠಶಾಲೆ ಮಾರ್ಗವಾಗಿ ಮೈಸೂರು ಮಹಾನಗರ ಪಾಲಿಕೆಗೆ ತಲುಪಿದ ಮೆರವಣಿಗೆಯಲ್ಲಿ ನೂರಾರು ಜನರು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸಿದ್ದರು. ವೀರಗಾಸೆ ಕುಣಿತ, ತಮಟೆ ಸದ್ದು ಜನರನ್ನು ಆಕರ್ಷಿಸಿತು.
ಮೆರವಣಿಗೆಯಲ್ಲಿ ನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ, ಜೆಡಿಎಸ್ ಮುಖಂಡ ಎಚ್.ಕೆ. ರಾಮು, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಕಾನ್ಯ ಶಿವಮೂರ್ತಿ, ವೀರಶೈವ ಲಿಂಗಾಯತ ಮುಖಂಡರಾದ ಲೋಕೇಶ್ ತುಂಬಲ, ಜಯಾಗೌಡ, ಆಯರಹಳ್ಳಿ ಪಿ. ವಿರೂಪಾಕ್ಷ, ಕೆ. ಕಿರಣ್ ಕುಮಾರ್, ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ರಮೇಶ್‌ಗೌಡರು, ಉಪಾಧ್ಯಕ್ಷ ಮಂಜುನಾಥ್ ಇತರರಿದ್ದರು.