News Kannada
Wednesday, March 22 2023

ಚಾಮರಾಜನಗರ

ವಾರಾಂತ್ಯ ಕರ್ಫ್ಯೂ ನಡುವೆ ಸರಳ ರೀತಿಯಲ್ಲಿ ಸಂಕ್ರಾಂತಿ ಹಬ್ಬ ಆಚರಣೆ

Photo Credit :

ಚಾಮರಾಜನಗರ/ಗುಂಡ್ಲುಪೇಟೆ : ಕೋವಿಡ್‌ ಕರಿನೆರಳು, ವಾರಾಂತ್ಯ ಕರ್ಫ್ಯೂ ನಡುವೆ ಜಿಲ್ಲೆಯಾದ್ಯಂತ ಶನಿವಾರ ಜನರು ಸಂಕ್ರಾಂತಿ ಹಬ್ಬವನ್ನು ಸರಳವಾಗಿ ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಕೋವಿಡ್‌ ನಿರ್ಬಂಧ ಇದ್ದುದರಿಂದ ಪ್ರಮುಖ ದೇವಾಲಯಗಳು ಮುಚ್ಚಿದ್ದವು. ಕರ್ಫ್ಯೂ ಜಾರಿಯಲ್ಲಿದ್ದುದರಿಂದ ಹೊರಗಡೆ ಅನಗತ್ಯ ಓಡಾಟವೂ ಸಾಧ್ಯವಾಗದೇ ಇದ್ದುದರಿಂದ ಜನರು ಮನೆಗೆ ಸೀಮಿತರಾಗಿ ಹಬ್ಬ ಆಚರಿಸಿದರು.

ಹೊಸ ವರ್ಷದ ಮೊದಲ ಹಬ್ಬದಂದು ಜನರು ಎಳ್ಳು ಬೆಲ್ಲ, ಕಬ್ಬನ್ನು ಪರಸ್ಪರ ಹಂಚಿಕೊಂಡು ಸಿಹಿಯನ್ನು ಸವಿದರು. ಪರಸ್ಪರ ಶುಭಾಶಯಗಳನ್ನು ಕೋರಿದರು.

ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಮನೆಗಳನ್ನು ತಳಿರು ತೋರಣ, ರಂಗೋಲಿಗಳಿಂದ ಸಿಂಗರಿಸಿದ್ದರು. ಮನೆಯ ಮುಂಭಾಗ ಸಂಕ್ರಾಂತಿಯ ಶುಭಾಶಯ ಕೋರು‌ವ ಬಣ್ಣ ಬಣ್ಣದ ವಿಶೇಷ ರಂಗೋಲಿಗಳು ಕಂಗೊಳಿಸಿದವು.

ಕರ್ಫ್ಯೂ ಕಾರಣದಿಂದ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯ, ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯ, ಚಾಮರಾಜನಗರದ ಚಾಮರಾಜೇಶ್ವರಸ್ವಾಮಿ ದೇವಾಲಯ, ತೆರಕಣಾಂಬಿ ಹೋಬಳಿಯ ಹುಲುಗನಮರಡಿ ವೆಂಟರಮಣಸ್ವಾಮಿ ದೇವಾಲಯ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ದೇವಾಲಯ, ಹರಳುಕೋಟೆಯ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಬಹುತೇಕ ಎಲ್ಲ ದೇವಾಲಯಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿತ್ತು. ಸಂಕ್ರಾಂತಿ ಅಂಗವಾಗಿ ದೇವಾಲಯದ ಅರ್ಚಕರು, ಸಿಬ್ಬಂದಿ ಉಪಸ್ಥಿತಿಯಲ್ಲಿ ಸರಳವಾಗಿ ಪೂಜಾ ಪುನಸ್ಕಾರಗಳು ನಡೆದವು.

ಬಿಳಿಗಿರಿರಂಗನಾಥಸ್ವಾಮಿ ದೇವಾಲಯದಲ್ಲಿ ಸಂಕ್ರಾಂತಿ ಜಾತ್ರೆ ರದ್ದಾಗಿತ್ತು. ಜಾತ್ರೆಯ ಸಂಭ್ರಮ ಪೂಜಾ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿತ್ತು. ನಗರ, ಪಟ್ಟಣ ಪ‍್ರದೇಶಗಳು ಹಾಗೂ ಗ್ರಾಮೀಣ ಭಾಗಗಳಲ್ಲಿರುವ ಸಣ್ಣ ದೇವಾಲಯಗಳಲ್ಲಿ ಬೆಳಗಿನ ಹೊತ್ತು ಸ್ವಲ್ಪ ಭಕ್ತರು ಕಂಡು ಬಂದರು. ಹೊತ್ತು ಕಳೆದಂತೆಯೆ ಅಲ್ಲೂ ಭಕ್ತರ ಸಂಖ್ಯೆ ಕ್ಷೀಣವಾಯಿತು. ಸಂಜೆ ಹೊತ್ತಿಗೆ ಭಕ್ತರು ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಕಿಚಡಿ, ಪೊಂಗಲ್‌: ಸಂಕ್ರಾಂತಿ ಅಂಗವಾಗಿ ಮಹಿಳೆಯರು ಮನೆಗಳಲ್ಲಿ ಕಿಚಡಿ, ಖಾರ, ಸಿಹಿ ಪೊಂಗಲ್‌, ಪಾಯಸ ಸೇರಿದಂತೆ ಇತರೆ ಭಕ್ಷ್ಯಗಳನ್ನು ಸಿದ್ಧಪಡಿಸಿ ಕುಟುಂಬ ಸಮೇತರಾಗಿ ಭೋಜನ ಸವಿದರು. ನಂತರ ಸ್ನೇಹಿತರು, ನೆಂಟರಿಷ್ಟರ ಮನೆಗೆ ತೆರಳಿ ಎಳ್ಳು ಬೆಲ್ಲ, ಕಬ್ಬು ನೀಡಿ ಪರಸ್ಪರ ಹಬ್ಬದ ಶುಭಾಶಯ ಕೋರಿದರು.

ಹಳ್ಳಿಗಳಲ್ಲಿ ಕುಗ್ಗದ ಸಂಭ್ರಮ: ನಗರ, ಪಟ್ಟಣ ಪ್ರದೇಶಗಳಲ್ಲಿ ಸಂಕ್ರಾಂತಿಯ ಸಂಭ್ರಮ ಕೊಂಚ ಕಡಿಮೆ ಇದ್ದಂತೆ ಕಂಡು ಬಂದರೂ, ಗ್ರಾಮೀಣ ಭಾಗಗಳಲ್ಲಿ ರೈತರು ಪ್ರತಿ ವರ್ಷದಂತೆ ಸುಗ್ಗಿ ಹಬ್ಬವನ್ನು ಆಚರಿಸಿದರು.

ಹಸುಗಳು, ಎತ್ತುಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ಹೊಸ ಫಸಲುಗಳನ್ನು ರಾಶಿ ಹಾಕಿ ಅವುಗಳಿಗೂ ಪೂಜೆ ಮಾಡಿದರು. ಸಂಜೆ ಹೊತ್ತು ಎತ್ತು, ಹಸುಗಳನ್ನು ಕಿಚ್ಚು ಹಾಯಿಸಿ ಸಂಭ್ರಮಿಸಿದರು.

ಕರ್ಫ್ಯೂ ನಡುವೆಯೂ ಜನ ಸಂಚಾರ

ಕೋವಿಡ್‌ ಹರಡುವಿಕೆ ತಡೆಗೆ ಸರ್ಕಾರ ಜಾರಿಗೊಳಿಸಿದ್ದ ವಾರಾಂತ್ಯ ಕರ್ಫ್ಯೂ ಶನಿವಾರ ಜಾರಿಯಲ್ಲಿದ್ದರೂ, ನಗರ, ಪಟ್ಟಣ ಪ್ರದೇಶಗಳಲ್ಲಿ ಜನರು, ವಾಹನಗಳ ಓಡಾಟ ಕೊಂಚ ಕಂಡು ಬಂದು.

ಆಸ್ಪತ್ರೆ, ಕ್ಲಿನಿಕ್‌, ಔಷಧಿ ಅಂಗಡಿಗಳು ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದವು. ಹೋಟೆಲ್‌, ಬಾರ್‌, ರೆಸ್ಟೋರೆಂಟ್‌ಗಳು ತೆರೆದಿದ್ದರೂ, ಪಾರ್ಸೆಲ್‌ ಮಾತ್ರ ಲಭ್ಯವಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಎಂದಿನಂತೆ ಇತ್ತು. ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದುದರಿಂದ ಬೇಡಿಕೆಗೆ ಅನುಗುಣವಾಗಿ ಬಸ್‌ಗಳು ಸಂಚರಿಸುತ್ತಿದ್ದವು.

See also  ಅಪ್ರಾಪ್ತ ಬುದ್ದಿಮಾಂದ್ಯೆ ಮೇಲೆ ಅತ್ಯಾಚಾರ: ಯುವಕನಿಗೆ 20 ವರ್ಷ ಜೈಲು ಶಿಕ್ಷೆ

ಸಂಕ್ರಾಂತಿ ಹಬ್ಬದ ದಿನವಾಗಿದ್ದರಿಂದ ಬೀದಿ ಬದಿ ಎಳ್ಳು ಬೆಲ್ಲ, ಹಣ್ಣು, ತರಕಾರಿ, ಹೂವುಗಳನ್ನು ಮಾರಾಟ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು. ಶುಕ್ರವಾರ ಹಬ್ಬದ ಅಂಗವಾಗಿ ಅಗತ್ಯ ಸಾಮಗ್ರಿಗಳನ್ನು ಖರೀದಿ ಮಾಡದೇ ಇರುವವರು ಶನಿವಾರ ನಗರ ಪಟ್ಟಣಗಳಿಗೆ ತೆರಳಿ ಖರೀದಿಯಲ್ಲಿ ತೊಡಗಿದ್ದರು. ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳು, ವೃತ್ತಗಳು ಹಾಗೂ ಸಾರ್ವಜನಿಕ ಕೇಂದ್ರಗಳಲ್ಲಿ ಪೊಲೀಸರು ಕಂಡು ಬರಲಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು