ಚಾಮರಾಜನಗರ: ಜಿಲ್ಲೆಯ ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಆಗಾಗ್ಗೆ ಕಾಡು ಪ್ರಾಣಿಗಳು ವಾಹನ ಸವಾರರ ಮೇಲೆ ದಾಳಿ ನಡೆಸುವುದು ಹೊಸದೇನಲ್ಲ. ಇದೀಗ ಮದ್ದೂರು – ಮೂಲೆಹೊಳೆ ನಡುವೆ ಕಾಡಾನೆ ಎರಡು ವಾಹನ ಸವಾರರ ಮೇಲೆ ಕಾಡಾನೆಗಳು ದಾಳಿ ನಡೆಸಿದ್ದು ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಂಡೀಪುರ ವ್ಯಾಪ್ತಿಯ ಮದ್ದೂರು ಮೂಲೆಹೊಳೆ ನಡುವೆ ಮೂರು ಮರಿಯಾನೆಗಳೊಂದಿಗೆ ಏಳು ಆನೆಗಳ ಹಿಂಡು ಕಾಡಿನಲ್ಲಿ ವಿಹಾರ ಮಾಡುತ್ತಿದ್ದಾಗ ಗಜ ಪಡೆಯ ಸಾರಥ್ಯ ವಹಿಸಿದ್ದ ಕಾಡಾನೆಗಳೆರಡು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದ ದ್ವಿಚಕ್ರ ವಾಹನದಲ್ಲಿದ್ದ ಕೇರಳ ಮೂಲದ ದಂಪತಿ ಮೇಲೆ ದಾಳಿ ಮಾಡಲು ಮುಂದಾಗಿದ್ದು, ಅವರು ಕೂದಲಳೆಯಂತರದಲ್ಲಿ ಪಾರಾಗಿದ್ದಾರೆ.
ಬಂಡೀಪುರದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಬಾರದು ಎಂಬ ನಿರ್ಬಂಧವಿದ್ದರೂ ಜನ ನಿಲ್ಲಿಸಿಕೊಂಡು ಪ್ರಾಣಿಗಳ ಚಿತ್ರೀಕರಣ ಮಾಡುವುದು ಆಗಾಗ್ಗೆ ನಡೆಯುತ್ತದೆ. ಇದು ಕೆಲವೊಮ್ಮೆ ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಲಿ.