ಚಾಮರಾಜನಗರ: ಹುಲಿಯೊಂದು ರೈತನ ಮೇಲೆ ದಾಳಿ ನಡೆಸಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹಿಮವದ್ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಗೋಪಾಲಪುರ ಗ್ರಾಮದ ಕಾಡಂಚಿನಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಅದೃಷ್ಟ ವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗೋಪಾಲಪುರ ಗ್ರಾಮದ ರೈತ ಗವಿಯಪ್ಪ ಎಂಬುವರೇ ಹುಲಿ ದಾಳಿಗೆ ಸಿಲುಕಿದವರು. ಗ್ರಾಮದ ಚನ್ನಪ್ಪ ಎಂಬುವರು ಕಾಡಂಚಿನಲ್ಲಿ ಜಮೀನು ಹೊಂದಿದ್ದು. ಹಸುವನ್ನು ತೋಟದಲ್ಲಿ ಮೇಯಲು ಬಿಟ್ಟಿದ್ದರು. ಈ ವೇಳೆ ಹುಲಿಯೊಂದು ಹಸುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಬಳಿಕ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ರೈತ ಗವಿಯಪ್ಪ ಅವರ ಮೇಲೆ ದಾಳಿ ನಡೆಸಿದೆ.
ಈ ವೇಳೆ ಅವರು ಹೆದರಿ ಕೂಗಾಡಿದ್ದರಿಂದ ಅದೃಷ್ಟವಶಾತ್ ಬಿಟ್ಟು ಹೋಗಿದೆ. ಆದರೆ ದಾಳಿ ಮಾಡಿದ ಪರಿಣಾಮ ಗವಿಯಪ್ಪರವರ ಬಲಗಣ್ಣಿಗೆ ಪೆಟ್ಟು ಬಿದ್ದಿದ್ದು, ತಲೆಗೆ ಪರಚಿದ ಗಾಯವಾಗಿ ರಕ್ತ ಹರಿದಿದೆ. ಹುಲಿಯ ದಾಳಿಯ ನಡುವೆಯೇ ಗವಿಯಪ್ಪ ಸಂಬಂಧಿಕರಿಗೆ ಮೊಬೈಲ್ ಕರೆ ಮಾಡಿ ಹುಲಿ ದಾಳಿ ಮಾಡಿದ ಸಂಗತಿ ತಿಳಿಸಿದ್ದಾರೆ. ಕೂಡಲೆ ಸ್ಥಳಕ್ಕೆ ಆಗಮಿಸಿದ ಸಂಬಂಧಿಕರು ಹಾಗೂ ಗ್ರಾಮಸ್ಥರು ಗವಿಯಪ್ಪ ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಹುಲಿ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಹಿಮವದ್ ಗೋಪಾಸ್ವಾಮಿ ಬೆಟ್ಟ ವಲಯ ಅರಣ್ಯಾಧಿಕಾರಿ ನವೀನ್ ಕುಮಾರ್, ಸಹಾಯಕ ಅರಣ್ಯಾಧಿಕಾರಿ ನವೀನ್ ಹಾಗೂ ಇನ್ನಿತರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದಾಗ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಹುಲಿ ದಾಳಿಯಿಂದಾಗಿ ಆತಂಕಗೊಂಡಿರುವ ಗ್ರಾಮಸ್ಥರು ಹುಲಿ ಸೆರೆಗೆ ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಘಟನೆ ಬಳಿಕ ಗೋಪಾಲಪುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಆತಂಕ ಸೃಷ್ಟಿಯಾಗಿದ್ದು, ರೈತರು ಜಮೀನಿಗೆ ತೆರಳಲು ಭಯ ಪಡುವಂತಾಗಿದೆ.