ಚಾಮರಾಜನಗರ: ರೈತನೊಬ್ಬ ಸುಮಾರು ಇಪ್ಪತ್ತು ವರ್ಷದ ಹಿಂದೆ ನಿರ್ಮಿಸಿಕೊಂಡಿದ್ದ ಸಮಾಧಿಯಲ್ಲಿಯೇ ಆತನ ಅಂತ್ಯಕ್ರಿಯೆ ನಡೆಸಿದ ಘಟನೆ ಸಮಾಧಿ ನಿರ್ಮಿಸಿದ್ದು, ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ತಾಲೂಕಿನ ನಂಜದೇವನಪುರ ಗ್ರಾಮದ ಪುಟ್ಟನಂಜಪ್ಪ(85) ಅವರೇ ತಮ್ಮ ಸಮಾಧಿಯನ್ನು ತಾವೇ ನಿರ್ಮಿಸಿಟ್ಟಿದ್ದಲ್ಲದೆ ಅದೇ ಸಮಾಧಿಯಲ್ಲಿಯೇ ಇದೀಗ ಚಿರನಿದ್ದೆಗೆ ಜಾರಿದ್ದಾರೆ. ಸಾಮಾನ್ಯವಾಗಿ ಎಲ್ಲರೂ ಸಾಯುವ ಬಗ್ಗೆ ಯೋಚಿಸುವುದೇ ಇಲ್ಲ. ಹೀಗಿರುವಾಗ ಸಮಾಧಿ ನಿರ್ಮಾಣ ಮಾಡಿಡುತ್ತಾರಾ? ಆದರೆ ಪುಟ್ಟನಂಜಪ್ಪ ಅವರು ಸುಮಾರು 65 ವರ್ಷವಾಗುತ್ತಿದ್ದಂತೆಯೇ ನಾನು ಯಾವಾಗ ಬೇಕಾದರೂ ಮೃತಪಡಬಹುದು. ಆಗ ನಮ್ಮ ಮನೆಯವರಿಗೆ ತೊಂದರೆ ಆಗಬಾರದೆಂದು ಸೂಕ್ತ ಸ್ಥಳವನ್ನು ಜಮೀನಿನಲ್ಲಿ ಆಯ್ಕೆ ಮಾಡಿ ಸಮಾಧಿಯನ್ನು ನಿರ್ಮಿಸಿದ್ದರು. ಆದರೆ ಅವರು ಅದಾದ ನಂತರ ಸುಮಾರು ಇಪ್ಪತ್ತು ವರ್ಷಗಳ ಕಾಲ ಬದುಕಿದ್ದರು.
ತಾವು ಸಮಾಧಿ ನಿರ್ಮಿಸುವ ವೇಳೆ ಅದರೊಳಗೆ ಕುಳಿತು ಸಮಾಧಿ ಹೇಗಿರಬೇಕೆಂಬುದರ ಬಗ್ಗೆ ಮತ್ತು ತಮಗೆ ಇಷ್ಟವಾಗುವ ರೀತಿಯಲ್ಲಿ ಗೋಪುರ ಶೈಲಿಯಲ್ಲಿ ನಿರ್ಮಿಸಿಕೊಂಡಿದ್ದರು. ಜತೆಗೆ ತಾವು ಯಾರಿಗೂ ಹೊರೆಯಾಗಬಾರದು. ತನಗೋಸ್ಕರ ಯಾರೂ ಹಣ ಖರ್ಚು ಮಾಡಬಾರದೆಂಬ ಉದ್ದೇಶದಿಂದ ತಮ್ಮದೇ ಹಣದಲ್ಲಿ ಸಮಾಧಿ ನಿರ್ಮಿಸಿ ತನ್ನ ಖರ್ಚಿನಲ್ಲಿಯೇ ಅಂತಿಮ ವಿಧಿ-ವಿಧಾನ ನೆರವೇರಬೇಕೆಂದು ಬಯಸಿದ್ದರು. ಅದಕ್ಕಾಗಿ ಬೇಕಾದ ವಿಭೂತಿ, ಕಳಶಗಳು, ಒಂದು ಲಕ್ಷ ಹಣವನ್ನೂ ತೆಗೆದಿರಿಸಿದ್ದರು.
ಪುಟ್ಟಮಲ್ಲಪ್ಪ ಅವರು ಸಾಕಷ್ಟು ಸ್ಥಿತಿವಂತರೇ ಆಗಿದ್ದು ಮೂರು ಪುತ್ರರಿದ್ದಾರೆ. ತಮ್ಮ ತಿಥಿಯನ್ನು ತಾವೇ ತಮ್ಮ ಹಣದಲ್ಲೇ ಮಾಡಬೇಕೆಂಬ ಸ್ವಾಭಿಮಾನದಿಂದಾಗಿ ಸಮಾಧಿ ನಿರ್ಮಾಣ ಹಾಗೂ ಹಣ ಎತ್ತಿಟ್ಟಿದ್ದರು ಎನ್ನಲಾಗಿದೆ. ಪುಟ್ಟಮಲ್ಲಪ್ಪ ಅವರ ಪತ್ನಿ ಕಳೆದ ವರ್ಷ ಕೊರೊನಾದಲ್ಲಿ ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರವನ್ನು ಮಕ್ಕಳಿಂದ ಹಣ ಪಡೆಯದೇ ತಾವೇ ನೆರವೇರಿಸಿದ್ದರು. ಅಂತ್ಯ ಸಂಸ್ಕಾರಕ್ಕೆ ಬೇಕಾದ ಪ್ರತಿಯೊಂದನ್ನು ತಂದಿಟ್ಟಿದ್ದರು. ಕಳೆದ 12 ದಿನಗಳಿಂದ ಅವರ ಆರೋಗ್ಯ ಹದಗೆಟ್ಟು 5 ದಿನಗಳಿಂದ ಮಾತು ನಿಂತಿತ್ತು, ಭಾನುವಾರ ಸಂಜೆ ಅವರು ಅಸುನೀಗಿದ್ದು, ಅವರ ಬಯಕೆಯಂತೆಯೇ ಅಂತಿಮ ವಿಧಿ ವಿಧಾನಗಳನ್ನು ನಡೆಸಲಾಗಿದೆ ಎಂದು ಪುತ್ರ ಗೌಡಿಕೆ ನಾಗೇಶ್ ತಿಳಿಸಿದ್ದಾರೆ.