ಚಾಮರಾಜನಗರ: ಪ್ರವಾಹದಿಂದ ರಕ್ಷಿಸಿಕೊಳ್ಳಲು ತೆಂಗಿನಮರ ಏರಿ ಕುಳಿತಿದ್ದ ಕಣ್ಣೇಗಾಲ ಗ್ರಾಮದ ರೈತರೊಬ್ಬರನ್ನು 10ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಜೀವದ ಹಂಗು ತೊರೆದು ತಹಶೀಲ್ದಾರರಾದ ಬಸವರಾಜು, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ಅಗ್ನಿಶಾಮಕ ಅಧಿಕಾರಿ ಶಿವಾಜಿರಾವ್ ಪವಾರ್ ಸೇರಿದಂತೆ ಇತರೆ ಅಧಿಕಾರಿ, ಸಿಬ್ಬಂದಿ, ಗ್ರಾಮದ ಯುವಕರು ರಕ್ಷಣೆ ಮಾಡಿದ್ದಾರೆ.
ಕಣ್ಣೇಗಾಲ ಗ್ರಾಮದ 62 ವರ್ಷದ ರಾಮಸ್ವಾಮಿ ನಾಯಕ ಅವರು ಕಣ್ಣೇಗಾಲ ಗ್ರಾಮದಿಂದ 2.5 ಕಿ.ಮೀ ದೂರವಿರುವ ತಮ್ಮ ಜಮೀನಿಗೆ ಸೋಮವಾರ ಬೆಳಿಗ್ಗೆ ತೆರಳಿದ್ದರು. ವಾಪಸ್ ಬರುವ ವೇಳೆಗೆ ನೀರಿನ ಮಟ್ಟ ಹೆಚ್ಚಾಯಿತು. ಆಶ್ರಯಕ್ಕಾಗಿ ತೆಂಗಿನಮರ ಏರಿ ಕುಳಿತಿದ್ದರು. ವಿಷಯ ಮುಟ್ಟಿಸಲು ಅವರ ಬಳಿ ಮೊಬೈಲ್ ಸಹ ಇರಲಿಲ್ಲ.
ಸಂಜೆ 4.30ರ ವೇಳೆಗೆ ವಿಷಯ ತಿಳಿಯುತ್ತಿದ್ದಂತೆಯೆ ಅಗ್ನಿಶಾಮಕ ದಳದ ಅಧಿಕಾರಿಗಳ ತಂಡ ತೆರಳಿ ಕಾರ್ಯಾಚರಣೆಗೆ ಇಳಿಯಿತು. ಆದರೆ ನೀರಿನ ರಭಸ ಹಾಗೂ ಮುಳ್ಳುಗಳಿಂದ ಕೂಡಿದ ಪ್ರದೇಶವಾಗಿದ್ದರಿಂದ ದೋಣಿ ಮೂಲಕ ರಕ್ಷಿಸುವ ಕಾರ್ಯ ಸತತವಾಗಿ ನಡೆದರೂ ಸಫಲವಾಗಲಿಲ್ಲ. ರಾತ್ರಿ 10 ಗಂಟೆ ವೇಳೆಗೆ ತಹಶೀಲ್ದಾರ್ ಬಸವರಾಜು, ಡಿವೈಎಸ್‌ಪಿ ಪ್ರಿಯದರ್ಶಿನಿ, ಸಬ್‌ಇನ್ಸ್ ಪೆಕ್ಟರ್ ತಾಜುದ್ದೀನ್ ಅವರೂ ಸಹ ಲೈಫ್ ಜಾಕೆಟ್ ಧರಿಸಿ ಗ್ರಾಮದ ಈಜು ಪರಿಣಿತರೊಂದಿಗೆ ಸೇರಿಕೊಂಡು ಸ್ವತಹ ಕಾರ್ಯಾಚರಣೆ ತಂಡದೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಒಂದು ಹಂತದಲ್ಲಿ ಅಧಿಕಾರಿಗಳು ತೆರಳುತ್ತಿದ್ದ ದೋಣಿ ನೀರಿನ ರಭಸಕ್ಕೆ ಸಿಲುಕಿ ಅಪಾಯಕ್ಕೀಡಾಗುವ ಆತಂಕ ಎದುರಾಯಿತು. ಬಳಿಕ ಜೆಸಿಬಿ ಸಹ ಬಳಕೆ ಮಾಡಲಾಯಿತು.
ದೋಣಿ, ಜೆಸಿಬಿಯಿಂದಲೂ ಕಾರ್ಯಾಚರಣೆಗೆ ಸಾಧ್ಯವಾಗದೇ ಇದ್ದಾಗ ಎರಡು ಟ್ರ್ಯಾಕ್ಟರ್‌ಗಳನ್ನು ಬಳಸಿಕೊಳ್ಳಲಾಯಿತು. ಆದರೂ ಸಹ ರಾಮಸ್ವಾಮಿ ನಾಯಕ ಅವರ ಬಳಿ ತಲುಪಲು ಸಾಧ್ಯವಾಗಲಿಲ್ಲ. ಇತರೆ ಅಧಿಕಾರಿಗಳು ಸ್ಥಳೀಯ ಗ್ರಾಮಸ್ಥರು, ನೆರವಿನಿಂದ ಹಗ್ಗಗಳನ್ನು ಕಂಬಗಳೂ ಸೇರಿದಂತೆ ಎಲ್ಲೆಲ್ಲಿ ಸಾಧ್ಯವಿದೆಯೋ ಅಲೆಲ್ಲಾ ಕಟ್ಟಿಕೊಂಡರು. ಸುಮಾರು ಉದ್ದ ಹಗ್ಗಗಳನ್ನು ಕಟ್ಟಿ ಅದರ ಮೇಲೆ ತೆರಳಿ ಕೊನೆಗೆ ತೆಂಗಿನಮರದ ಮೇಲಿದ್ದ ರಾಮಸ್ವಾಮಿ ನಾಯಕ ಅವರಿಗೆ ಹಗ್ಗೆ ಎಸೆದು ಸೊಂಟಕ್ಕೆ ಹಗ್ಗ ಕಟ್ಟಿಕೊಳ್ಳಲು ಸೂಚಿಸಲಾಯಿತು. ನಂತರ ಜೀವದ ಹಂಗು ತೊರೆದು ಹರಸಾಹಸ ಮಾಡಿ ಮುಂಜಾನೆ ೩ ಗಂಟೆಯ ವೇಳೆಗೆ ರಾಮಸ್ವಾಮಿ ನಾಯಕ ಅವರನ್ನು ಸುರಕ್ಷಿತವಾಗಿ ಕರೆತರಲಾಯಿತು.
ರಾತ್ರಿಯಿಡಿ ನಡೆದ ರಕ್ಷಣಾ ಕಾರ್ಯಾಚರಣೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ನಿರ್ದೇಶನ ನೀಡಿದರು. ಜಿಲ್ಲಾಧಿಕಾರಿಯವರು ಕಾರ್ಯಾಚರಣೆ ತಂಡದೊಂದಿಗೆ ಸತತ ಸಂಪರ್ಕದಲ್ಲಿದ್ದು ಅಗತ್ಯ ಮಾರ್ಗದರ್ಶನ ಮಾಡಿದರು. ಕಾರ್ಯಾಚರಣೆಗೆ ಗ್ರಾಮಸ್ಥರು, ಯುವಕರು, ಗ್ರಾಮ ಪಂಚಾಯಿತಿ ಸದಸ್ಯರು ಸಹ ನೆರವಾಗಿದ್ದಾರೆ.
ಮಂಗಳವಾರ ಬೆಳಿಗ್ಗೆ ರಾಮಸ್ವಾಮಿ ನಾಯಕ ಅವರ ಮನೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯಿತ್ರಿ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ರಾಮಸ್ವಾಮಿ ನಾಯಕ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಲು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೂಚಿಸಿದರು.