ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವಿನಹಳ್ಳಿಯಿಂದ ಹನೂರುವರೆಗೆ ಕೆಶಿಪ್ ಯೋಜನೆಯಡಿ ಪ್ರಗತಿಯಲ್ಲಿರುವ ರಸ್ತೆ ಕಾಮಗಾರಿಯನ್ನು ವಸತಿ, ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಪರಿಶೀಲಿಸಿದರು.
ಮಧುವಿನಹಳ್ಳಿಯಿಂದ ಹನೂರು ಮಾರ್ಗದುದ್ದಕ್ಕೂ ವ್ಯಾಪಕವಾಗಿ ರಸ್ತೆ ಕಾಮಗಾರಿ ಪರಿಶೀಲಿಸಿದ ಸಚಿವರು ಕೆಲವೆಡೆ ರಸ್ತೆ ಅಪೂರ್ಣವಾಗಿರುವುದನ್ನು ಕಂಡು ಕೇಶಿಪ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
24 ಕಿ.ಮೀ. ರಸ್ತೆ ಉದ್ದದ ಪೈಕಿ 1.25 ಕಿ.ಮೀ. ನಷ್ಟು ಮಾತ್ರ ಕಾಮಗಾರಿ ನಿರ್ವಹಿಸಲು ತೊಡಕಾಗಿದೆ. ಉಳಿದ ಎಲ್ಲಕಡೆ ವೇಗವಾಗಿ ಕೆಲಸ ಕೈಗೊಂಡು ರಸ್ತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಕೆಶಿಪ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ಮಧುವಿನಹಳ್ಳಿ ಬಳಿ ಬಹಳ ಹೊತ್ತು ನಿಂತು ರಸ್ತೆ ಕಾಮಗಾರಿ ವೀಕ್ಷಿಸಿದ ಸಚಿವರು ಸ್ಥಳದಲ್ಲಿಯೇ ಕಾಮಗಾರಿ ನಿರ್ವಹಣೆ ಬಗ್ಗೆ ಸಂಪೂರ್ಣ ವಿವರ ಪಡೆದರು.
ದೊಡ್ಡಿಂದುವಾಡಿ ಗ್ರಾಮದ ಬಳಿ ಸೇತುವೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಪರ್ಯಾಯ ರಸ್ತೆಗಳು ಆಗಬೇಕೆಂದು ಸೂಚಿಸಿದರು. ಕಾಮಗೆರೆ ಬಳಿ ಪ್ರಗತಿಯಲ್ಲಿರುವ ಕಾಮಗಾರಿ ವೀಕ್ಷಿಸಿ ಅಲ್ಲಿಯೇ ಇದ್ದ ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಗಳನ್ನು ಇನ್ನೊಂದು ಬದಿಗೆ ಸ್ಥಳಾಂತರಗೊಳಿಸುವಂತೆ ಹೇಳಿದರು.
ಕಾಮಗೆರೆ ಗ್ರಾಮದಲ್ಲಿ ಜನರ ಅಹವಾಲು ಆಲಿಸಿದ ಸಚಿವರು ರಸ್ತೆ ಕಾಮಗಾರಿಗೆ ಕೆಲವೆಡೆ ಭೂಮಿ ಬಿಟ್ಟುಕೊಡುವ ಸಂಬಂಧ ಸಮಾಲೋಚಿಸಿದರು. ಭೂಮಿ ನೀಡಲಿರುವ ಹಾಗೂ ನೀಡಿರುವ ರೈತರಿಗೆ ತ್ವರಿತವಾಗಿ ಪರಿಹಾರಗಳನ್ನು ವಿತರಿಸುವಂತೆ ಸೂಚಿಸಿದರು. ರಸ್ತೆಗಾಗಿ ಬಿಟ್ಟುಕೊಡಬಹುದಾದ ಅಂಗಡಿಗಳನ್ನು ಪಟ್ಟಿ ಮಾಡಬೇಕು. ಮಾನವೀಯತೆ ಹಾಗೂ ವಾಸ್ತವ ಅಂಶಗಳ ಆಧಾರದ ಮೇಲೆ ಪರಿಹಾರ ನೀಡುವ ಕಾರ್ಯವಾಗಬೇಕೆಂದು ತಿಳಿಸಿದರು.
ಹನೂರು ಪಟ್ಟಣದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಸಂಬಂಧ ಪರಿಶೀಲನೆ ನಡೆಸಿದರು. ಇದೇ ವೇಳೆ ಪರ್ಯಾಯ ರಸ್ತೆಯನ್ನು ಸಹ ಮಾಡುವಂತೆ ಸೂಚಿಸಿದರು. ಬಂಡಳ್ಳಿ ರಸ್ತೆಯೂ ಸಹ ಹದಗೆಟ್ಟಿದ್ದೂ ಇದರ ದುರಸ್ತಿ ಕಾರ್ಯವನ್ನು ಸಹ ಕೈಗೆತ್ತಿಕೊಳ್ಳುವಂತೆ ಹೇಳಿದರು.
ಶಾಸಕರಾದ ಎನ್. ಮಹೇಶ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜು, ಉಪವಿಭಾಗಾಧಿಕಾರಿ ಗೀತಾಹುಡೇದ, ಕೆಶಿಪ್ ಯೋಜನೆಯ ಎಂಜಿನಿಯರ್ ರಾಜು, ಜಾವೇದ್, ಲೋಕೊಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ವಿನಯ್‍ಕುಮಾರ್ ಸೇರಿದಂತೆ ಇತರರು ಇದ್ದರು.