ಚಾಮರಾಜನಗರ: ಪ್ರವಾಸಕ್ಕೆಂದು ಜಿಲ್ಲೆಯ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದಿದ್ದ ಪ್ರವಾಸಿಗನಿಗೆ ಉಸಿರಾಟದ ಸಮಸ್ಯೆ ಎದುರಾಗಿದ್ದು ಸಕಾಲದಲ್ಲಿ ಆಕ್ಸಿಜನ್ ಸಿಗದೆ ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ಅನಿಲ್ (32) ಮೃತಪಟ್ಟ ದುರ್ದೈವಿ. ಈತ ತನ್ನ ಕುಟುಂಬದೊಂದಿಗೆ ಚಾಮರಾಜನಗರಕ್ಕೆ ಪ್ರವಾಸಕ್ಕೆ ಬಂದಿದ್ದು ಸೋಮವಾರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಮುಗಿಸಿಕೊಂಡು ಹಿಂತಿರುಗುವ ವೇಳೆ ಅನಿಲ್ ಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ಕೂಡಲೇ ಆ್ಯಂಬುಲೆನ್ಸ್ನಲ್ಲಿ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದು, ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದ ಕಾರಣ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಮೈಸೂರಿನ ಜಯದೇವ ಆಸ್ಪತ್ರೆಗೆ ಕಳುಹಿಸಲು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲೇ ಅನಿಲ್ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗುತ್ತದೆ, ಜೀವ ಉಳಿಯುತ್ತದೆ ಎಂಬ ಆಸೆಯೊಂದಿಗೆ ಬಂದರೆ ಇಲ್ಲೇ ಜೀವ ಹೋಯಿತು. ಏಕೆ ಆಸ್ಪತ್ರೆಗೆ ಬರಬೇಕು? ಎಂದು ಪತ್ನಿ ಲಕ್ಷ್ಮಿ ಆಸ್ಪತ್ರೆಯ ವೈದ್ಯರು ಸಿಬ್ಬಂದಿಯ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸ್ಪಷ್ಟನೆ ನೀಡಿರುವ ಆಸ್ಪತ್ರೆ ವೈದ್ಯಾಧಿಕಾರಿ ಡಾ ಮಂಜುನಾಥ್ ಕಾರ್ಡಿಯಾಕ್ ಅರೆಸ್ಟ್ ಆಗಿದೆ. ಆಕ್ಸಿಜನ್ ಕೊಟ್ಟು ಮೈಸೂರಿಗೆ ಕಳುಹಿಸುವ ಸಂದರ್ಭದಲ್ಲಿ ಹೃದಯಾಘಾತವಾಗಿದ್ದು ಮತ್ತೆ ಒಳಗೆ ಕರೆದು ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ. ಸಾವಿಗೆ ಆಕ್ಸಿಜನ್ ಕಾರಣವಲ್ಲ ಎಂದು ಹೇಳಿದ್ದಾರೆ.