ಚಾಮರಾಜನಗರ: ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ವಾರ್ಡನ್ ಅವರ ಆದೇಶದ ಮೇರೆಗೆ ಅರಣ್ಯಾಧಿಕಾರಿಗಳು ಶನಿವಾರ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ (ಬಿಟಿಆರ್) ರಾಮಾಪುರ ಶಿಬಿರದಿಂದ ನಾಲ್ಕು ಆನೆಗಳನ್ನು ಮಧ್ಯಪ್ರದೇಶಕ್ಕೆ ಕಳುಹಿಸಿದ್ದಾರೆ.
ರಾಮಾಪುರ ಅರಣ್ಯ ಶಿಬಿರದಿಂದ ಕೃಷ್ಣ, ಗಜ, ಮರ್ಷಿಹಾ ಮತ್ತು ಪೂಜಾ ಎಂಬ 4 ಆನೆಗಳನ್ನು ರವಾನಿಸಲಾಗಿದೆ. ಈ ಹಿಂದೆ ಮಧ್ಯಪ್ರದೇಶದ ಸತ್ಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ 5 ಆನೆಗಳನ್ನು ಕಳುಹಿಸಲು ಯೋಜಿಸಲಾಗಿತ್ತು. ಆದರೆ, ಗಣೇಶ ಆನೆ ಅನಾರೋಗ್ಯದಿಂದ ಮೃತಪಟ್ಟಿದ್ದು, ಇದೀಗ ಎರಡು ಗಂಡು, ಎರಡು ಹೆಣ್ಣು ಸೇರಿ ಒಟ್ಟು 4 ಆನೆಗಳನ್ನು ಕಳುಹಿಸಲಾಗಿದೆ.
ಇನ್ನೊಂದು ಆನೆ ನಿಸರ್ಗವನ್ನು ಕಳೆದ ತಿಂಗಳು ಮಧ್ಯಪ್ರದೇಶಕ್ಕೆ ರವಾನಿಸಲಾಗಿತ್ತು. ರಾಂಪುರ ಆನೆ ಶಿಬಿರದಿಂದ ನಾಲ್ಕು ಆನೆಗಳನ್ನು ಪಶುವೈದ್ಯಾಧಿಕಾರಿಗಳು ತಪಾಸಣೆಗೊಳಪಡಿಸಿ ಆರೋಗ್ಯವಾಗಿರುವುದನ್ನು ದೃಢಪಡಿಸಿದ್ದಾರೆ. ಆನೆಗಳನ್ನು ಅಧಿಕೃತವಾಗಿ ಮಧ್ಯಪ್ರದೇಶದ ಭೋಪಾಲ್ನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ಕೊಬ್ರಗಡೆ ಅವರಿಗೆ ಹಸ್ತಾಂತರಿಸಲಾಯಿತು.