ಚಾಮರಾಜನಗರ: ಕುಟುಂಬದ ಜತೆ ಪ್ರವಾಸಕ್ಕೆ ತೆರಳಿದ್ದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಬಫರ್ ವಲಯದ ಡಿ.ಆರ್.ಎಫ್.ಓ ನವ ವಿವಾಹಿತ ಎನ್.ಮಹಾನಂದ್ ಊಟಿ ರಸ್ತೆಯ ತಲಕುಂದ ಸಮೀಪದಲ್ಲಿ ಶನಿವಾರ ಲಾರಿ ಮತ್ತು ಕಾರು ನಡುವೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಶನಿವಾರ ಕುಂಟುಂಬದ 11 ಸದಸ್ಯರು ಎರಡು ಕಾರಿನಲ್ಲಿ ತಮಿಳು ನಾಡಿನ ಊಟಿಗೆ ಪ್ರವಾಸ ತೆರಳಿದ್ದರು. ಒಂದು ಕಾರಿನಲ್ಲಿ (ಶಿಫ್ಟ್ ) ಡಿ.ಆರ್.ಎಫ್.ಒ ಮಹಾನಂದ್ ಪತ್ನಿ ಲಾವಣ್ಯ, ಅಕ್ಕ ರಾಜೇಶ್ವರಿ, ಬಾವ ಲಿಂಗರಾಜು ಇದ್ದರು. ಇನ್ನೊಂದು(ಇನೋವಾ) ಕಾರಿನಲ್ಲಿ ಮಹಾನಂದನ ತಾಯಿ ಚೆನ್ನಜಮ್ಮ, ಅಣ್ಣ ಶಾಂತರಾಜು, ಅತ್ತಿಗೆ ಕಾವ್ಯ ಹಾಗೂ ಕುಟುಂಬದ ಮಕ್ಕಳಾದ ನಿಹಾನ್ ,ನೇಹ, ರಚನಾ, ತೇಜಸ್ ಹೊರಟ್ಟಿದ್ದರು. ಮಳೆಯ ನಡುವೆಯು ಪ್ರಯಾಣ ಮುಂದುವರೆದಿತ್ತು.
ಶನಿವಾರ 3 ಗಂಟೆ ಸಮಯದಲ್ಲಿ ಊಟಿ ರಸ್ತೆಯ ತಲಕುಂದ ಸಮೀಪದ ರಸ್ತೆಯಲ್ಲಿ ಎದುರಿನಿಂದ ಬಂದ ಲಾರಿ ಮಹಾನಂದ ಇದ್ದ ಶಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮುಂಭಾಗ ಕುಳಿತಿದ್ದ ಮಹಾನಂದ್ ಮೃತಪಟ್ಟಿದ್ದು ಕಾರು ಚಾಲಿಸುತ್ತಿದ್ದ ಲಿಂಗರಾಜುಗೆ ಎರಡು ಕಾಲು ಮುರಿದಿದೆ ಎನ್ನಲಾಗಿದೆ.
ಇನ್ನು ಹಿಂಬದಿ ಸೀಟ್ ನಲ್ಲಿ ಕುಳಿತಿದ್ದ ಲಾವಣ್ಯ ಕೈ ಮುರಿದಿದ್ದು ಹಾಗೂ ರಾಜೇಶ್ವರಿಗೂ ಕೈ, ತಲೆಗೆ ಗಭೀರವಾಗಿ ಪೆಟ್ಟಾಗಿ ಗಾಯಗೊಂಡಿದ್ದಾರೆ. ಬಳಿಕ ತಮಿಳುನಾಡಿನ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಊಟಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತಪಟ್ಟಿದ್ದ ಮಹಾನಂದ್ ದೇಹವನ್ನು ಶವಗಾರದಲ್ಲಿ ಇರಿಸಲಾಗಿದೆ. ಕೈ, ಕಾಲು, ತಲೆಗೆ ಗಭೀರವಾಗಿ ಗಾಯಗೊಂಡಿದ್ದ ಲಾವಣ್ಯ, ರಾಜೇಶ್ವರಿ ಮತ್ತು ಲಿಂಗರಾಜು ಅನ್ನು ಕೊಯಮತ್ತೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಳೆದ ನ.10 ರಂದು ಪಟ್ಟಣದ ಬಸವೇಶ್ವರ ನಗರ ನಿವಾಸಿ ಡಿ.ಆರ್.ಎಫ್.ಒ ಮಹಾನಂದ್ ಹಾಗೂ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಟಗರಪುರದ ಲಾವಣ್ಯಗೆ ಮೈಸೂರಿನ ಕಲ್ಯಾಣ ಮಂಟಪದಲ್ಲಿ ವಿವಾಹವಾಗಿತ್ತು. ದುರದೃಷ್ಟವಶಾತ್ ನೂತನ ದಂಪತಿಗಳು ಕುಟುಂಬದ ಜತೆ ಪ್ರವಾಸ ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದ್ದು. ಮದುವೆಯಾಗಿ 1 ತಿಂಗಳು ತುಂಬುವಷ್ಟರಲ್ಲಿ ಮಹಾನಂದ್ ಮೃತಪಟ್ಟಿದ್ದಾರೆ. ಕುಟುಂಬದ ಸದಸ್ಯರ ಅಕ್ರಂದನ ಮುಗಿಲುಮುಟ್ಟಿದೆ.