ಚಾಮರಾಜನಗರ: ಶ್ರೀಕ್ಷೇತ್ರ ಚಿಕ್ಕಲ್ಲೂರಿನಲ್ಲಿ ಇದೇ ಜನವರಿ 6ರಿಂದ 10ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವಕ್ಕೆ ಅಗತ್ಯವಿರುವ ಸಕಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಶಾಸಕರಾದ ಆರ್. ನರೇಂದ್ರ ಅವರು ಸೂಚನೆ ನೀಡಿದರು.
ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರು ಹಳೇ ಮಠದ ಆವರಣದಲ್ಲಿ ನಡೆದ ಜಾತ್ರಾ ಮಹೋತ್ಸವ ಸಿದ್ದತೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕೋವಿಡ್ ನಿಂದಾಗಿ ಕಳೆದೆರಡು ವರ್ಷಗಳಲ್ಲಿ ಈ ಹಿಂದೆ ನಡೆದಂತೆ ಜಾತ್ರೆ ನಡೆದಿರಲಿಲ್ಲ. ಹೀಗಾಗಿ ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಲಿದ್ದಾರೆ. ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಮೂಲ ಸೌಕರ್ಯದಲ್ಲಿ ಯಾವುದೇ ಕೊರತೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಶಾಸಕರು ತಿಳಿಸಿದರು.
ಜಾತ್ರಾ ಸಮಯದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಯಾವುದೇ ತೊಂದರೆಯಾಗಬಾರದು. ಹೆಚ್ಚು ನಲ್ಲಿಗಳನ್ನು ಅಳವಡಿಸಿ ನೀರಿನ ಪೂರೈಕೆ ಮಾಡಬೇಕು. ಶೌಚಾಲಯಗಳನ್ನು ತೆರೆಯಬೇಕು. ವಿಶೇಷವಾಗಿ ಸ್ವಚ್ಚತಾ ಕೆಲಸಗಳು ಆಗಬೇಕು. ಜಾತ್ರೆ ಆರಂಭವಾಗುವ ಮುಂಚೆಯೇ ದೇವಾಲಯ, ಜಾತ್ರಾ ಪ್ರದೇಶಗಳಲ್ಲಿ ಸ್ವಚ್ಚತಾ ಕಾರ್ಯ ಪೂರ್ಣಗೊಳಿಸಬೇಕು. ಜಾತ್ರೆ ಮುಗಿದ ನಂತರವು ಸ್ವಚ್ಚತಾ ಕೆಲಸಗಳನ್ನು ನಿರ್ವಹಿಸಬೇಕು ಎಂದು ಶಾಸಕರು ನಿರ್ದೇಶನ ನೀಡಿದರು.
ಬಸ್ಸುಗಳ ನಿಯೋಜನೆ ಸಂಬಂಧ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಶ್ರೀನಿವಾಸ್ ಅವರು ಮಾಹಿತಿ ನೀಡಿ ಚಿಕ್ಕಲ್ಲೂರಿಗೆ 200 ಬಸ್ಗಳನ್ನು ಕಾರ್ಯಾಚರಣೆ ಮಾಡಲು ಸಿದ್ದತೆ ಮಾಡಲಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರಾದ ನರೇಂದ್ರ ಅವರು ಈ ಬಾರಿಯ ಜಾತ್ರೆಗೆ ಹೆಚ್ಚಿನ ಭಕ್ತಾಧಿಗಳು ಬರುವ ನಿರೀಕ್ಷೆಯಿದೆ. ಹೀಗಾಗಿ 200 ಬಸ್ ಗಳಲ್ಲದೇ ಇನ್ನೂ 50 ಬಸ್ಸುಗಳನ್ನು ಹೆಚ್ಚಾಗಿ ನಿಯೋಜನೆ ಮಾಡಬೇಕು. ಹನೂರು, ಕೊಳ್ಳೇಗಾಲ, ಟಿ. ನರಸೀಪುರ, ಮಳವಳ್ಳಿ, ಸೇರಿದಂತೆ ನಾನಾ ಭಾಗಗಳಿಂದ ಅಗತ್ಯಕ್ಕೆ ಅನುಗುಣವಾಗಿ ಬಸ್ಗಳ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ವಾಹನಗಳ ಸಂಚಾರ ಹೆಚ್ಚಾಗಿ ಇರಲಿರುವುದರಿಂದ ರಸ್ತೆಗಳನ್ನು ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಗುಂಡಿಗಳನ್ನು ಮುಚ್ಚುವ ಕಾರ್ಯ ವೈಜ್ಞಾನಿಕವಾಗಿ ಆಗಬೇಕು. ವಾಹನಗಳ ನಿಲುಗಡೆಗೂ ಸೂಕ್ತ ಸ್ಥಳ ಎಲ್ಲೆಲ್ಲಿ ಲಭ್ಯವಿದೆಯೋ ಅಲ್ಲಿ ವ್ಯವಸ್ಥೆ ಮಾಡಬೇಕು. ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ತಿಳಿಸಿದರು.
ಚಿಕ್ಕಲ್ಲೂರಿಗೆ ತನ್ನದೇ ಆದ ಪರಂಪರೆ ಇದೆ. ಭಕ್ತರ ಭಾವನೆಗಳಿಗೆ ಯಾವುದೇ ಧಕ್ಕೆಯಾಗಬಾರದು. ಮಠಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಭಿನ್ನಾಬಿಪ್ರಾಯ, ಗೊಂದಲವನ್ನು ಬಗೆಹರಿಸಿಕೊಳ್ಳಿ. ಜಾತ್ರೆ ಎಂದಿನಂತೆ ಅಚ್ಚುಕಟ್ಟಾಗಿ ನಡೆಯಬೇಕು. ಇದಕ್ಕೆ ಪೂರಕವಾಗಿರುವ ಎಲ್ಲಾ ಸಿದ್ದತಾ ಕ್ರಮಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕೆಂದು ಶಾಸಕರಾದ ಆರ್. ನರೇಂದ್ರ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಅವರು ಮಾತನಾಡಿ ಜಾತ್ರೆ ಸಂಬಂಧ ಈಗಾಗಲೇ ಸ್ಥಳ ಪರಿಶೀಲಿಸಿ ಎಲ್ಲಾ ಕ್ರಮ ತೆಗೆದುಕೊಳ್ಳಲಾಗಿದೆ. ಅಧಿಕಾರಿಗಳ ಸಭೆ ನಡೆಸಲಾಗಿದೆ. ಭಕ್ತರ ಭಾವನೆಗಳಿಗೆ ತಕ್ಕಂತೆ ಈ ಹಿಂದಿನಂತೆಯೇ ಜಾತ್ರೆ ನಡೆಯುವ ನಿಟ್ಟಿನಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಿದ್ದು ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಕಾನೂನು ಸುವ್ಯವಸ್ಥೆ ಪಾಲನೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್, ಡಿವೈಎಸ್ಪಿ ಜಿ.ಯು. ಸೋಮೇಗೌಡ ಅವರು ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಉಪವಿಭಾಗಾಧಿಕಾರಿ ಗೀತಾ ಹುಡೇದ, ತಾಲೂಕು ಪಂಚಾಯತ್ ಕಾರ್ಯನಿವಾಹಕ ಅಧಿಕಾರಿ ಮಹೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.