ಚಾಮರಾಜನಗರ: ರೈತರು ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಮನುಷ್ಯನಂತಿರುವ ಬೆದರುಬೊಂಬೆ ನಿರ್ಮಿಸಿ ಜಮೀನಿನ ಬಳಿ ನಿಲ್ಲಿಸುವುದನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತಾರೆ. ಆದರೆ ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರ ಗ್ರಾಮದ ರೈತರೊಬ್ಬರು ತಮ್ಮ ನಾಯಿಗೆ ಹುಲಿಯಂತೆ ಬಣ್ಣಬಳಿದು ಕಾಡು ಪ್ರಾಣಿಗಳನ್ನು ಹೆದರಿಸುವ ಪ್ರಯತ್ನ ಮಾಡಿದ್ದಾರೆ.
ನಾಯಿ ಹುಲಿ ರೂಪ ತಾಳಿ ಗ್ರಾಮದ ಎಲ್ಲೆಂದರಲ್ಲಿ ಓಡಾಡುತ್ತಿರುವುದರಿಂದ ಈ ಭಾಗದಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ದಾರಿಹೋಕರು ಹುಲಿ ರೂಪದ ನಾಯಿಯನ್ನು ನೋಡಿ ಭಯ ಬೀಳುವುದರ ಜೊತೆಗೆ ನಗುತ್ತಿದ್ದಾರೆ. ಯಾರಪ್ಪಾ ಪುಣ್ಯಾತ್ಮ ಹೀಗೆ ಮಾಡಿದವನು ಎಂದು ಕೇಳುತ್ತಿದ್ದಾರೆ. ಒಮ್ಮೆಗೆ ನೋಡಿದ ಕೆಲವರು ಹೆದರುತ್ತಿದ್ದು, ಬಳಿಕ ನಾಯಿಗೆ ಹುಲಿಯಂತೆ ಬಣ್ಣ ಬಳಿದಿರುವುದು ಖಚಿತವಾಗುತ್ತಿದ್ದಂತೆಯೇ ನಿಟ್ಟುಸಿರು ಬಿಡುತ್ತಿದ್ದಾರೆ.
ಮನುಷ್ಯರ ಕೈಚಳಕದಿಂದ ಹುಲಿಯ ರೂಪವನ್ನು ಪಡೆದಿರುವ ಮೂಕ ನಾಯಿ ಮಾತ್ರ ಗ್ರಾಮದ ತುಂಬಾ ಓಡಾಡುತ್ತಾ ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಸದ್ಯ ಹುಲಿಯಂತಿರುವ ನಾಯಿಯನ್ನು ನೋಡಿ ಕಾಡು ಪ್ರಾಣಿಗಳು ಹೆದರುತ್ತಿವೆಯೋ ಗೊತ್ತಿಲ್ಲ. ಆದರೆ ಮನುಷ್ಯರಂತು ಬೆಚ್ಚಿ ಬೀಳುತ್ತಿರುವುದು ಸತ್ಯ.