News Kannada
Saturday, January 28 2023

ಚಾಮರಾಜನಗರ

ಯಳಂದೂರು: ಸಾಹಿತ್ಯ ಕ್ಷೇತ್ರಕ್ಕೆ ನಾಟಕಕಾರ ಸಂಸರವರ ಕೊಡುಗೆ ಅಪಾರ

Yelandur: The contribution of dramatist Samsara to the field of literature is immense.
Photo Credit : By Author

ಯಳಂದೂರು: ಹತ್ತನೆ ತರಗತಿಯಲ್ಲಿಯೇ ಅನುತ್ತೀರ್ಣರಾಗಿದ್ದ ನಾಟಕಕಾರ ಸಂಸರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಅಪಾರವಾಗಿದೆ ಎಂದು ಗುಂಬಳ್ಳಿ ಗ್ರಾಮದ ಪ್ರೌಢಶಾಲಾ ಕನ್ನಡ ಶಿಕ್ಷಕ ಕುಮಾರಸ್ವಾಮಿ ಹೇಳಿದರು.

ತಾಲೂಕಿನ ಅಗರ ಗ್ರಾಮದ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ನಾಟಕಕಾರ ಸಂಸರವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಸಂಸರವರು ಕನ್ನಡ ಮೇರು ನಾಟಕಕಾರರಲ್ಲಿ ಒಬ್ಬರಾಗಿದ್ದಾರೆ. ಯಳಂದೂರು ತಾಲೂಕಿನ ಅಗರ ಗ್ರಾಮದಲ್ಲಿ 1898ರ ಜನವರಿಯಲ್ಲಿ ಹುಟ್ಟಿದ ಇವರ ಹೆಸರು ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್ ಎಂಬುದಾಗಿದೆ. ಹತ್ತನೆ ತರಗತಿಯಲ್ಲೇ ಅನುತ್ತೀರ್ಣರಾಗಿದ್ದ ಇವರು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆ ಅಪಾರವಾಗಿದೆ.

ಕನ್ನಡದಲ್ಲಿ ಪಾಂಡಿತ್ಯ ಪಡೆದಿದ್ದ ಇವರು ತಮಿಳು ಹಾಗೂ ಆಂಗ್ಲಭಾಷೆಯಲ್ಲೂ ಅಪಾರ ಜ್ಞಾನವನ್ನು ಹೊಂದಿದ್ದರು. ವಿಶ್ವದ ಹಲವು ದೇಶಗಳ ಪರ್ಯಟನೆ ಮಾಡಿದ್ದರು. ಒಟ್ಟು 23ನಾಟಕಗಳನ್ನು ಇವರು ರಚಿಸಿದ್ದರು ಎಂಬ ಐತಿಹ್ಯವಿದೆ. ಇದರಲ್ಲಿ ಸುಗುಣಗಂಭೀರ, ವಿಗಡ ವಿಕ್ರಮರಾಯ, ವಿಜಯನಾರಸಿಂಹ, ಬಿರುದಂತೆಂಬರಗಂಡ, ಬೆಟ್ಟದ ಅರಸು, ಮಂತ್ರಶಕ್ತಿ, ಎಂದ 6 ನಾಟಕಗಳು ಮಾತ್ರ ಇದುವರೆಗೆ ಇವರ ಬಗ್ಗೆ ಲಭ್ಯವಾದ ನಾಟಕಗಳಾಗಿವೆ.

ಇನ್ನುಳಿದ 17 ನಾಟಕಗಳು ಲಭಿಸಿಲ್ಲ. ತಮ್ಮ ನಾಟಕಗಳಲ್ಲಿ ಸಮಕಾಲೀನ ಪ್ರಜ್ಞೆಯನ್ನು ಬಳಸಿಕೊಂಡಿದ್ದ ಇವರು ಐತಿಹಾಸಿಕ ನಾಟಕ ರಚನೆಯಲ್ಲಿ ಕನ್ನಡ ಸಾಹಿತ್ಯಕ್ಕೆ ಹೊಸ ಮಾರ್ಗವನ್ನು ಹಾಕಿಕೊಟ್ಟಿದ್ದಾರೆ. ಮಾನಸಿಕ ತೊಳಲಾಟದಲ್ಲಿ ಸಿಲುಕಿದ್ದ ಈ ವ್ಯಕ್ತಿ ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿ ಕೊನೆಗೆ 1939 ರಲ್ಲಿ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದು ದುರಂತವಾಗಿದೆ ಎಂದರು.

ನಿವೃತ್ತ ತಹಶೀಲ್ದಾರ್ ವೈ.ಎಂ. ನಂಜಯ್ಯ ಮಾತನಾಡಿ, ಯಳಂದೂರು ತಾಲೂಕು ಅನೇಕ ಸಾಹಿತ್ಯ ರತ್ನಗಳನ್ನು ನಾಡಿಗೆ ನೀಡಿದೆ. ಇದರಲ್ಲಿ ಸಂಸರವರೂ ಒಬ್ಬರಾಗಿರುವುದು ಈ ತಾಲೂಕಿನ ಹೆಮ್ಮೆಯಾಗಿದೆ. ಇಂತಹ ಮಹನೀಯರ ಜಯಂತಿಯನ್ನು ಹೆಚ್ಚು ಅರ್ಥಪೂರ್ಣವಾಗಿ ಆಚರಿಸಬೇಕು. ಇದೇ ಇವರಿಗೆ ನೀಡುವ ಗೌರವವಾಗಿದೆ. ಜೊತೆಗೆ ಮುಂದಿನ ಪೀಳಿಗೆಗೆ ಇವರನ್ನು ಪರಿಚಯಿಸುವ ಕೆಲಸವಾಗಬೇಕು ಎಂದರು.

ಕಸಾಪ ತಾಲೂಕು ಅಧ್ಯಕ್ಷ ಯರಿಯೂರು ನಾಗೇಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಎಂ.ಎಸ್. ಪ್ರವೀಣ್, ಮುಖ್ಯಶಿಕ್ಷಕಿ ಎಂ.ಕೆ. ಗಾಯತ್ರಿ ಮಾತನಾಡಿದರು. ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂಗಚಹಳ್ಳಿ ನಾರಾಯಣಸ್ವಾಮಿ ಗ್ರಾಪಂ ಅಧ್ಯಕ್ಷೆ ರಾಜಮ್ಮ ಬಸವರಾಜು, ಉಪತಹಸೀಲ್ದಾರ್ ಪುಷ್ಪಲತಾ, ಅಂಬಳೆ ವೀರಭದ್ರನಾಯಕ, ಹೊನ್ನೂರು ಪುಟ್ಟಸ್ವಾಮಿ, ವಸಂತ್, ಪ್ರವೀಣ್, ಶಿಕ್ಷಕರಾದ ಜಯರಾಮು, ಮಹದೇವ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

See also  ರಾಮನಗರ: ಧಾರ್ಮಿಕ ಮತಾಂತರದ ವಿರುದ್ಧ ದೂರು ದಾಖಲಿಸಿದ ಹಿಂದೂ ಸಂಘಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು