ಚಾಮರಾಜನಗರ: ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ವೇಳೆ ನಡೆದ ಕಾಡಾನೆ ದಾಳಿಗೆ ಅರಣ್ಯ ವೀಕ್ಷಕ ಬಲಿಯಾದ ಘಟನೆ ತಾಲೂಕಿನ ಎತ್ತುಗಟ್ಟಿ ಬೆಟ್ಟದ ಅರಣ್ಯಪ್ರದೇಶದಲ್ಲಿ ನಡೆದಿದೆ.
ಅರಣ್ಯ ಇಲಾಖೆಯಲ್ಲಿ ಅರಣ್ಯ ವೀಕ್ಷಕ(ವಾಚರ್) ಹೊಸಪೋಡು ನಿವಾಸಿ ನಂಜಯ್ಯ (35) ಮೃತಪಟ್ಟ ದುರ್ದೈವಿ. ನಂಜಯ್ಯ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರನಾಗಿದ್ದು, ಅರಣ್ಯ ವೀಕ್ಷಕನಾಗಿ ಕೆಲಸ ಮಾಡುತ್ತಿದ್ದನು. ಎತ್ತುಗಟ್ಟಿ ಬೆಟ್ಟದಲ್ಲಿ ಆನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ನಂಜಯ್ಯ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ವಿಚಾರ ತಿಳಿದ ಶಾಸಕ ಸಿ.ಪುಟ್ಟರಂಗಶೆಟ್ಟಿ ಘಟನೆಯ ಬಗ್ಗೆ ಮಾಹಿತಿಪಡೆದುಕೊಂಡು, ಸಿಮ್ಸ್ ಶವಾಗಾರಕ್ಕೆ ತೆರಳಿ, ಮೃತ ನಂಜಯ್ಯನ ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇವೇಳೆ ಅವರು ಮಾತನಾಡಿ, ಈ ಭಾಗದಲ್ಲಿ ಆಗಾಗ್ಗೆ ಕಾಡಾನೆಗಳು ರೈತರ ಜಮೀನುಗಳಿಗೆ ಲಗ್ಗೆ ಹಾಕಿ, ಫಸಲನ್ನು ನಾಶಪಡಿಸಿ, ವ್ಯಕ್ತಿಗಳ ಮೇಲೂ ದಾಳಿ ನಡೆಸಿರುವ ಘಟನೆಗಳು ನಡೆದಿವೆ.
ಇಲಾಖೆಯಿಂದ ನೀಡುವ 15ಲಕ್ಷ ರೂ. ಪರಿಹಾರ ಯಾವುದಕ್ಕೂ ಸಾಲದು, ಆತನ ಕುಟುಂಬಕ್ಕೆ ಅರಣ್ಯಇಲಾಖೆಯಿಂದ 50 ಲಕ್ಷ ಪರಿಹಾರ ಕೊಡುವಂತೆ ಸರಕಾರಕ್ಕೆ ಪತ್ರ ಬರೆಯುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಆನೆಗಳನ್ನು ಓಡಿಸುವ ಕುರಿತು ವಾಚರ್ ಗಳಿಗೆ ಸೂಕ್ತ ತರಬೇತಿ ನೀಡಬೇಕು, ಆಗ ಎದುರಾಗುವ ಅಪಾಯವನ್ನು ತಪ್ಪಿಸಬಹುದಾಗಿದೆ. ಆನೆಗಳನ್ನು ಕಾಡಿಗೆ ಓಡಿಸುವಾಗ ಇಂತಹ ಘಟನೆಗಳು ನಡೆಯದಂತೆ ಇಲಾಖೆಯವರು ಎಚ್ಚರವಹಿಸಬೇಕು ಎಂದರು.
ಆರ್ಎಫ್ಒ ಉಮೇಶ್, ಡಿಆರ್ಎಫ್ಒ ಚಂದ್ರಕುಮಾರ್,ಎಸಿಎಫ್ ಸುರೇಶ್, ಮೃತನಂಜಯ್ಯನ ಕುಟುಂಬವರ್ಗದವರು ಹಾಜರಿದ್ದರು.