ಯಳಂದೂರು: ಕಳೆದ 50 ವರ್ಷಗಳಿಂದಲೂ ರಾಜ್ಯದಲ್ಲಿ ವಾಸ ಮಾಡುವ ಪೌರ ಕಾರ್ಮಿಕರಿಗೆ ಹಕ್ಕುಪತ್ರ ವಿತರಣೆ ಮಾಡಿರಲಿಲ್ಲ. ಈ ವಿಷಯ ರಾಜ್ಯ ಸರ್ಕಾರದ ಗಮನಕ್ಕೆ ಬಂದು ರಾಜ್ಯಾದ್ಯಂತ ಪೌರ ಕಾರ್ಮಿಕರಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಎನ್.ಮಹೇಶ್ ಮಾಹಿತಿ ನೀಡಿದರು.
ಪಟ್ಟಣದ ಸಿಡಿಎಸ್ ಸಮುದಾಯ ಭವನದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಪಟ್ಟಣದ ಪೌರ ಕಾರ್ಮಿಕರಿಗೆ ಹಕ್ಕುಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 1018 ಪೌರ ಕಾರ್ಮಿಕ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ಆಧಾರ್ ಕಾರ್ಡ್, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಸೇರಿದಂತೆ ಎಲ್ಲಾ ಸವಲತ್ತುಗಳು ಇವರಿಗಿದ್ದರೂ. ಇವರು ವಾಸ ಮಾಡುವ ಮನೆಗಳಿಗೆ ಹಕ್ಕುಪತ್ರಗಳನ್ನೇ ನೀಡದಿರುವುದು ವಿಪರ್ಯಾಸ ಸಂಗತಿಯಾಗಿತ್ತು.
ಈ ವಿಷಯ ಸರ್ಕಾರದ ಗಮನಕ್ಕೆ ಬಂದು ಇವರಿಗೆ ಹಕ್ಕುಪತ್ರ ನೀಡಲಾಗುತ್ತಿದೆ. ಇದರಿಂದ ಇವರೂ ಕೂಡ ತಮ್ಮ ಮನೆಗಳ ನಿಜವಾದ ಮಾಲೀಕರಾಗುವ ಅವಕಾಶ ಪಡೆದಂತಾಗಿದೆ. ಯಳಂದೂರು ಪಟ್ಟಣದಲ್ಲಿ 28ಮಂದಿ ಹಾಗೂ ಕೊಳ್ಳೇಗಾಲದಲ್ಲಿ 990 ಮಂದಿಗೆ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ. ಕೊಳ್ಳೇಗಾಲದ ನಂಜಯ್ಯನಕಟ್ಟೆಯಲ್ಲಿ ವಾಸ ಮಾಡುವ 62 ಕುಟುಂಬಗಳು ಕಳೆದ 40 ವರ್ಷಗಳಿಂದ ಇಲ್ಲಿ ವಾಸವಾಗಿದ್ದಾರೆ. ಆದರೆ ಇವರಿಗೆ ಹಕ್ಕುಪತ್ರ ನೀಡಲು ನೀರಾವರಿ ಇಲಾಖೆಯು ಇದು ನಮ್ಮ ಜಾಗ ಎಂಬ ತಕರಾರು ಎತ್ತಿದೆ. ಈ ಸಮಸ್ಯೆಯನ್ನು ಕಾನೂನಾತ್ಮಕವಾಗಿ ಪರಿಹರಿಸಿ ಇವರಿಗೂ ಹಕ್ಕುಪತ್ರ ನೀಡಲು ಕ್ರಮ ವಹಿಸಲಾಗುವುದು. ಇದರೊಂದಿಗೆ ಡಿ.ದರ್ಜೆಯ ಎಲ್ಲಾ ನೌಕರಿಗೂ ನೇರವಾಗಿ ಅವರ ಖಾತೆಗೆ ಹಣವನ್ನು ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಗಮನ ಹರಿಸಲಾಗುವುದು ಎಂದು ಮಾಹಿತಿ ನೀಡಿದರು.
ಪಪಂ ಅಧ್ಯಕ್ಷೆ ಪ್ರಭಾವತಿ ರಾಜಶೇಖರ್, ನಾಮನಿರ್ದೇಶಿತ ಸದಸ್ಯರಾದ ಮಹೇಶ್, ರಘು, ನಿಂಗರಾಜು ಮುಖ್ಯಾಧಿಕಾರಿ ಮಲ್ಲೇಶ್, ಸಮುದಾಯ ಸಂಘಟಕ ಪರಶಿವಮೂರ್ತಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಎಇಇ ರಾಮಚಂದ್ರ ಜೆಇ ಕಿರಣ್ ಸೇರಿದಂತೆ ಹಲವರು ಇದ್ದರು.