ಚಾಮರಾಜನಗರ: ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆದ ವಿಜಯ ಸಂಕಲ್ಪ ಅಭಿಯಾನ ಉದ್ಘಾಟನಾ ಕಾರ್ಯಕ್ರಮ ಬಿಜೆಪಿಯ ಒಳ ಜಗಳ, ಬಣ ರಾಜಕೀಯಕ್ಕೆ ಸಾಕ್ಷಿಯಾಯಿತು.
ಜ.29ರವರೆಗೆ ಬಿಜೆಪಿ ವತಿಯಿಂದ ರಾಜ್ಯದಾದ್ಯಂತ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನಕ್ಕೆ ಬಂಡಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಜವಬ್ದಾರಿಯನ್ನು ಮುಖಂಡ ನಿಶಾಂತ್ ಅವರಿಗೆ ವಹಿಸಲಾಗಿತ್ತು. ಈ ಸಂಬಂಧ, ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ಡಾ.ಪ್ರೀತನ್ ನಾಗಪ್ಪ ಬೆಂಬಲಿಗರು ನಿಶಾಂತ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
‘ನಮಗೆ ಪ್ರೀತನ್ ನಾಗಪ್ಪ, ದತ್ತೇಶ್ ಅವರೇ ನಾಯಕರು. ನಮ್ಮೊಂದಿಗೆ ಮಾತನಾಡಲು ನೀವು ಯಾರು? ನಿಮಗೆ ಪಕ್ಷದಲ್ಲಿ ಯಾವ ಸ್ಥಾನ ನೀಡಲಾಗಿದೆ? ಬಂಡಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೂ ನಿಮಗೂ ಏನು ಸಂಬಂಧ’ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ನಿಶಾಂತ್ ಬೆಂಬಲಿಗರಿಗೂ ಪ್ರೀತನ್ ಬೆಂಬಲಿಗರ ನಡುವೆ ಗಲಾಟೆಯಾಗಿದೆ. ಶನಿವಾರ ಬೆಳಿಗ್ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ ಅಧ್ಯಕ್ಷತೆಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲೂ ಇದೆ ಅಸಮಾಧಾನ ಭುಗಿಲೆದ್ದಿತು.
‘ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಜನತೆಯೊಂದಿಗೆ ಸಂಪರ್ಕದಲ್ಲಿರುವ ಪ್ರೀತನ್ ನಾಗಪ್ಪ ಅವರ ವರ್ಚಸ್ಸಿಗೆ ಕುಂದು ತರುವ ಕೆಲಸ ನಡೆಯುತ್ತಿದೆ. ಅಲ್ಲದೇ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿಶಾಂತ್ ಕೇವಲ ಲಿಂಗಾಯತ ಸಮುದಾಯವನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುತ್ತಿದ್ದು, ಉಳಿದ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ’ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕಮಲ ಪಾಳಯದಲ್ಲಿ ಬಣ ರಾಜಕೀಯ ಹಾಗೂ ಒಳಜಗಳ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಜನಧ್ವನಿ ವೆಂಕಟೇಶ್ ಬೆಂಬಲಿಗರಿಗೂ, ಪ್ರೀತನ್ ನಾಗಪ್ಪ ಬೆಂಬಲಿಗರಿಗೂ ಗಲಾಟೆಗಳಾಗಿವೆ. ‘ರಾಷ್ಟ್ರೀಯ ಪಕ್ಷದಲ್ಲಿ ಆಕಾಂಕ್ಷಿಗಳಿರುವುದು ಸಹಜ. ಆದರೆ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗಾಗಿ ಶ್ರಮಿಸುವುದು ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಆಕಾಂಕ್ಷಿಗಳಿಂದಲೇ ಪಕ್ಷಕ್ಕೆ ಹಾನಿಯಾಗುವ ಸಂಭವವಿದೆ. ಆದ್ದರಿಂದ ಪಕ್ಷದ ಹಿರಿಯ ನಾಯಕರು ಇದಕ್ಕೆ ಕಡಿವಾಣ ಹಾಕಿ ಇಂಥ ಘಟನೆಗನ್ನು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಪಕ್ಷದ ಆಂತರಿಕ ಕಲಹ ಅಭ್ಯರ್ಥಿಯ ಗೆಲುವಿಗೆ ಕಂಟಕವಾಗಬಹುದು ಎನ್ನುತ್ತಾರೆ ಕಾರ್ಯಕರ್ತರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ.ದತ್ತೇಶ್ ಕುಮಾರ್, ‘ಪಕ್ಷದಲ್ಲಿ ಬಣ ರಾಜಕೀಯ ಇಲ್ಲ. ಪಕ್ಷದಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿರುವುದು ಗಮನಕ್ಕೆ ಬಂದಿದೆ. ಎಲ್ಲವನ್ನೂ ಸರಿಪಡಿಸಲಾಗುವುದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಲಾಗುವುದು’ ಎಂದರು.