ಚಾಮರಾಜನಗರ: ಮನೆಯೊಂದರಲ್ಲಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ ಭರತ್, ಗುಂಡ್ಲುಪೇಟೆಯ ಕಾವ್ಯಾ ಮತ್ತು ಮೈಸೂರಿನ ಲೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ.
ಕೊಳ್ಳೇಗಾಲ ದತ್ತ ಮೆಡಿಕಲ್ಸ್ ಮಾಲೀಕ ವಿನಯ್ ಜನವರಿ 18ರಂದು ಕುಟುಂಬ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಶಿವಮೊಗ್ಗಕ್ಕೆ ತೆರಳಿದ್ದರು. ಈ ಅವಕಾಶವನ್ನು ಬಳಸಿಕೊಂಡು ಆರೋಪಿ ಭರತ್ ಮನೆಯನ್ನು ಲೂಟಿ ಮಾಡಿದ್ದರು.
ಕಳ್ಳತನದ ನಂತರ ಆರೋಪಿ ಭರತ್ ಮೈಸೂರಿನಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಪ್ರಿಯತಮೆ ಕಾವ್ಯಾಗೆ ಚಿನ್ನಾಭರಣ ನೀಡಿ ಮಾರಾಟ ಮಾಡಿದ್ದ.
ತನಿಖೆಯ ನಂತರ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಭರತ್, ಇಬ್ಬರು ಆರೋಪಿಗಳೊಂದಿಗೆ ಸೇರಿ ಕೃತ್ಯದಲ್ಲಿ ತೊಡಗಿರುವುದು ಕಂಡುಬಂದಿತ್ತು.
ಬಳಿಕ ಆರೋಪಿಗಳನ್ನು ಬಂಧಿಸಲಾಯಿತು. ಕೊಳ್ಳೇಗಾಲ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ ಪೊಲೀಸರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.