ಗುಂಡ್ಲುಪೇಟೆ: ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ಮಹದೇಶ್ವರ ಕೆರೆಗೆ ಶಾಸಕ ನಿರಂಜನ್ ಕುಮಾರ್ ಬಾಗಿನ ಅರ್ಪಿಸಿದರು. ಬಳಿಕ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರಲ್ಲದೆ, ಮಾತನಾಡಿದ ಅವರು, ಮಳವಳ್ಳಿ ಗ್ರಾಮದ ರೈತಾಪಿ ವರ್ಗಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಹದೇಶ್ವರ ಕೆರೆಗೆ ನೀರು ಹರಿಸುವ ಮೂಲಕ ಕೆರೆ ತುಂಬಿಸಿ, ಇಂದು ಕೆರೆಗೆ ಬಾಗಿನ ಅರ್ಪಿಸಿರುವುದಾಗಿ ಹೇಳಿದರು.
ತಾಲೂಕಿನ ಅಂತರ್ಜಲ ಸಮಸ್ಯೆಯಿಂದ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿತ್ತು. ಆದರೆ ನನ್ನ ಅಧಿಕಾರವದಿಯಲ್ಲಿ ಅತೀ ಹೆಚ್ಚು ಮಳೆ ಆಗಿದ್ದು ಹಾಗೂ ಆ ಸಾಲಿನಲ್ಲಿ ಕೆರೆ ತುಂಬಿಸುವ ಯೋಜನೆ ಪ್ರಾರಂಭ ಮಾಡಿದ್ದು ನಮ್ಮ ಕ್ಷೇತ್ರಕ್ಕೆ ವರದಾನವಾಯಿತು.
ಶಾಸಕ ಆಗುವ ಮೊದಲೇ ನಾನು ಮಾಜಿ ಸಿಎಂ ಯಡಿಯೂರಪ್ಪ ನವರ ಜೊತೆ ಮಾತನಾಡಿದ್ದರಿಂದ ನಮ್ಮ ತಾಲೂಕಿಗೆ ಕೆರೆಗಳ ಪುನಶ್ಚೇತನಕ್ಕೆ ಒಂದೇ ಬಾರಿ ಅನುದಾನ ದೊರೆತಿದ್ದಾಗಿ ತಿಳಿಸಿದರು. ಇಡೀ ಮಳವಳ್ಳಿ ಗ್ರಾಮದಲ್ಲಿ ರಸ್ತೆ ನಿರ್ಮಾಣ ಹಾಗೂ ಚರಂಡಿ ವ್ಯವಸ್ಥೆ ಮಾಡಿರುವುದು ನನಗೆ ಖುಷಿ ತಂದಿದೆ ಎಂದರು.
ಈ ವೇಳೆ ಮಾತನಾಡಿದ ಗುಡಿಮನೆ ಅಭಿಷೇಕ್ ಅವರು, ಮಳವಳ್ಳಿ ಗ್ರಾಮದ ಹಾಗೂ ತಾಲೂಕಿನ ರೈತಾಪಿ ವರ್ಗಕ್ಕೆ ನೀರಿನ ಸೌಲಭ್ಯ ನೀಡಲು ಎಲ್ಲ ಕೆರೆಗೆ ನೀರನ್ನು ತುಂಬಿಸುವ ಕಾರ್ಯಮಾಡಿದ್ದಾರೆ ಎಂದು ಶಾಸಕರನ್ನು ಶ್ಲಾಘಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದ್ದರು.