ಚಾಮರಾಜನಗರ: ರೈತ ಸಂಘವು ಪ್ರೊ. ನಂಜುಂಡಸ್ವಾಮಿ ಅವರ ಕರ್ಮಭೂಮಿಯಲ್ಲಿ ಅವರ ಪ್ರೇರಣೆಯಿಂದ ಯುವ ಘಟಕವನ್ನು ಆರಂಭಿಸುವುದರ ಮೂಲಕ ಚಳವಳಿಗೆ ಹೊಸ ಪ್ರಾಣವಾಯು ಸಿಗುವಂತೆ ಮಾಡಿದೆ ಎಂದು ಚಿಂತಕ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಅಭಿಪ್ರಾಯಪಟ್ಟರು.
ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ ನೆನಪಿನ ದಿನಾಚರಣೆ ಅಂಗವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಮ್ಮಿಕೊಂಡಿದ್ದ ಸಂಘದ ಯುವಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಂಜುಂಡಸ್ವಾಮಿ ಅವರು 80ರ ದಶಕದಲ್ಲೇ ಪ್ರಮುಖವಾಗಿ ನಾಲ್ಕು ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದರು. ರೈತರ ಸಂಖ್ಯೆ, ಕೃಷಿ ಕ್ಷೇತ್ರ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ ಎಂದು ಅವರು ಆಗಲೇ ಪ್ರತಿಪಾದಿಸಿದ್ದರು. ಕೃಷಿ ಕ್ಷೇತ್ರಕ್ಕೆ ಡಬ್ಲ್ಯುಟಿಒ ಒಪ್ಪಂದ, ಡಂಕನ್ ನಿಯಮಗಳು ಅನುಕೂಲಕರ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಡುತ್ತಿದ್ದ ಸಂದರ್ಭದಲ್ಲಿ ಈ ಒಪ್ಪಂದಗಳಿಂದ ರೈತರಿಗೆ ಆಗುವ ತೊಂದರೆಗಳ ಬಗ್ಗೆ ಮಾತನಾಡಿದ್ದರು. ಈ ಒಪ್ಪಂದ ವಿಫಲವಾದಾಗ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಜಾರಿಗೊಳಿಸಿತು. ರೈತರು ಈ ಒಪ್ಪಂದದಿಂದಲೂ ದೂರ ಉಳಿಯಬೇಕು ಎಂದರು.
ಕೃಷಿ ಉತ್ಪಾದನೆಗಾಗಿ ವಿದೇಶದ ಹಸಿರು ಕ್ರಾಂತಿ ಮಾದರಿ ನಮ್ಮ ದೇಶಕ್ಕೆ ಸರಿ ಹೊಂದುವುದಿಲ್ಲ. ಇಲ್ಲಿನ ರೈತರು ಸ್ಥಳೀಯವಾದ ಭಾರತದ ಮಾದರಿಯನ್ನು ಹುಟ್ಟುಹಾಕಬೇಕು ಎಂದು ನಂಜುಂಡಸ್ವಾಮಿ ಪ್ರತಿಪಾದಿಸಿದ್ದರು. ರೈತ ಚಳವಳಿ, ಆಂದೋಲನಕ್ಕೆ ಸ್ಪಷ್ಟವಾದ ರೂಪು ರೇಷೆ ಕೊಟ್ಟಿದ್ದರು. ಈಗ ರೈತ ಚಳವಳಿಯಲ್ಲಿ ಹಿರಿಯರೇ ಇದ್ದಾರೆ. ಹೊಸಬರು, ಯುವಕರು ಬರಬೇಕು. ಹಿರಿಯರು ಇದ್ದರೆ ಅಲ್ಲಿ ಆಚರಣೆಗಳು ಹೆಚ್ಚು. ಸಂಘರ್ಷ ಕಡಿಮೆ. ಚಳವಳಿಯಲ್ಲಿ ಆಚರಣೆಗಳು ಕಡಿಮೆಯಾಗಿ ಸಂಘರ್ಷಗಳು ಹೆಚ್ಚಾಗಬೇಕು ಎಂದು ಸಲಹೆ ನೀಡಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಢಿ ಇದು 10 ವರ್ಷಗಳ ಕನಸು. ಪುಟ್ಟಣ್ಣಯ್ಯ ಅವರು ಇದ್ದಾಗಲೇ ಯುವ ಘಟಕದ ಬಗ್ಗೆ ಚರ್ಚಿಸಿದ್ದರು. ರೈತ ಚಳವಳಿ ಆರಂಭವಾದ ಹೊತ್ತಿನಲ್ಲಿ ಯುವಕರೇ ಅದನ್ನು ಮುನ್ನಡೆಸುತ್ತಿದ್ದರು. ಈಗ ಯುವ ಜನರು ಕೃಷಿಯತ್ತ ಬರುತ್ತಿಲ್ಲ. ರೈತರ ಮಕ್ಕಳು ಕೂಡ ನಗರಗಳಿಗೆ ತೆರಳಿ ಉದ್ಯೋಗದಲ್ಲಿ ತೊಡಗಿದ್ದಾರೆ. ಈಗಿನ ಚಳವಳಿಯ ರೂಪ ಬೇರೆಯಾಗಿದೆ. ಸಾಮಾಜಿಕ ಜಾಲತಾಣಗಳು, ತಂತ್ರಜ್ಞಾನಗಳು ಬಂದಿವೆ. ಇಂತಹ ಸಂದರ್ಭದಲ್ಲಿ ನಮ್ಮ ಚಳವಳಿಯೂ ಪ್ರಬಲವಾಗಬೇಕು ಎಂಬ ಉದ್ದೇಶದಿಂದ ಯುವ ಘಟಕ ಆರಂಭಿಸಲಾಗಿದೆ’ ಎಂದರು.
ದೆಹಲಿಯ ಯುವ ರೈತ ಮುಖಂಡ ದೀಪಕ್, ರೈತ ಮುಖಂಡರಾದ ಎಸ್.ಸಿ.ಮಧುಚಂದನ್, ಎ.ಎಂ.ಮಹೇಶ್‌ಪ್ರಭು, ಪ್ರಸನ್ನ ಎನ್.ಗೌಡ, ರೈತ ಸಂಘದ ಚಾಮರಸ ಮಾಲಿ ಪಾಟೀಲ, ನುಲೆನೂರು ಎಂ.ಶಂಕರಪ್ಪ, ಕೆಂಪೂಗೌಡ, ಬನ್ನೂರು ಕೃಷ್ಣಪ್ಪ, ರಮ್ಯ ರಾಮಣ್ಣ, ಮಹದೇವಸ್ವಾಮಿ, ಪ್ರೇಮ್‌ಕುಮಾರ್, ಶಿವಕುಮಾರ್ ಹೆಗ್ಗವಾಡಿಪುರ, ರಂಗಕರ್ಮಿ ವೆಂಕಟರಾಜು ಇದ್ದರು.
ಇದಕ್ಕೂ ಮೊದಲು, ನಗರದಲ್ಲಿ ರೈತ ಸಂಘದ ವತಿಯಿಂದ ಬೃಹತ್ ಮೆರವಣಿಗೆ ನಡೆಯಿತು. ಪ್ರವಾಸಿ ಮಂದಿರದಲ್ಲಿ ಆರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ನಂದಿಭವನದವರೆಗೆ ಸಾಗಿತು. ಎತ್ತಿನಗಾಡಿ, ಟ್ರ್ಯಾಕ್ಟರ್‌ಗಳು, ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿದರು.