ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ನಿಸರ್ಗ ಚೆಲುವಿನೊಂದಿಗೆ ಗಮನಸೆಳೆಯುವುದಲ್ಲದೆ, ಅಪರೂಪದ ಪ್ರಾಣಿಪಕ್ಷಿಗಳಿಗೂ ಆಶ್ರಯ ತಾಣವಾಗಿ ಗಮನಸೆಳೆಯುತ್ತಿದ್ದು, ಹುಲಿ, ಕರಡಿ, ಕಾಡಾನೆ ಸೇರಿದಂತೆ ಹಲವು ಪ್ರಾಣಿಗಳು ದರ್ಶನ ನೀಡುವುದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇತ್ತ ಮುಖ ಮಾಡುತ್ತಿದ್ದಾರೆ.
ಬಿಳಿಗಿರಿರಂಗನಬೆಟ್ಟವು ಪ್ರಾಣಿ, ಪಕ್ಷಿ ಮತ್ತು ಸಸ್ಯ ಸಂಕುಲ, ಬೆಟ್ಟಗುಡ್ಡಗಳಿಂದ ಆವೃತವಾದ ನಿಸರ್ಗ ಸುಂದರ ಅರಣ್ಯವಾಗಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರಿನಿಂದ ಸುಮಾರು 15ಕಿಮೀ ದೂರದಲ್ಲಿದೆ. ಸಮುದ್ರಮಟ್ಟದಿಂದ ಸುಮಾರು 1552 ಮೀಟರ್ ಎತ್ತರದಲ್ಲಿದ್ದು, ಸುಮಾರು 750 ಚದರ ಕಿ.ಮೀ. ವಿಸ್ತಾರವನ್ನು ಹೊಂದಿದೆ. ಇಲ್ಲಿನ ಮುಖ್ಯ ವಿಶೇಷತೆ ಏನೆಂದರೆ ಬಿಳಿಪಟ್ಟೆಗಳ ಹುಲಿಗಳ ಹಾಗೂ ಏಷ್ಯಾದ ಆನೆಗಳ ವಾಸಕ್ಕೆ ಇದು ಯೋಗ್ಯ ತಾಣವಾಗಿದೆ.
ಅರಣ್ಯದಲ್ಲಿ ಶ್ರೀಗಂಧ, ಹೊನ್ನೆ, ಮತ್ತಿ, ಬೂರುಗ, ಬೀಟೆ, ಬನ್ನಿ, ಮೊದಲಾದ ಅಮೂಲ್ಯ ಮರಗಳಲ್ಲದೆ ಐತಿಹಾಸಿಕ ದೊಡ್ಡ ಮತ್ತು ಚಿಕ್ಕ ಸಂಪಿಗೆ ಇಲ್ಲಿನ ಆಕರ್ಷಣೆಯಾಗಿದೆ. ಹುಲಿ, ಚಿರತೆ, ಕರಡಿ, ಆನೆ, ಕಾಡೆಮ್ಮೆ, ಜಿಂಕೆ ಸೇರಿದಂತೆ ಕಾಡು ಪ್ರಾಣಿಗಳು, 420ಕ್ಕೂ ಅಧಿಕ ಪಕ್ಷಿ ಸಂಕುಲಗಳಿವೆ.
ವನ್ಯಧಾಮವಾಗಿರುವ ಬಿಳಿಗಿರಿರಂಗನಬೆಟ್ಟವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲಾಗಿದ್ದು, ಇದು ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಕೊಂಡಿಯಾಗಿದೆ. ಈ ಅರಣ್ಯದಲ್ಲಿ ಬಹಳ ಹಿಂದಿನಿಂದಲೂ ಸೋಲಿಗರು ವಾಸ ಮಾಡುತ್ತಾ ಬಂದಿದ್ದು, ಇಲ್ಲಿ ಸಿಗುವ ಅರಣ್ಯ ಉತ್ಪನ್ನವೇ ಅವರ ಬದುಕಿಗೆ ಆಸರೆಯಾಗಿದೆ. ಇನ್ನು ಬಿಳಿಗಿರಿರಂಗನ ಬೆಟ್ಟ ವ್ಯಾಪ್ತಿಗೆ ಸೇರುವ ಬೇಡಗುಳಿ, ಹೊನ್ನಮೇಟಿ, ಅತ್ತಿಖಾನಿ ಮೊದಲಾದ ಅರಣ್ಯ ಪ್ರದೇಶಗಳು ನಿಸರ್ಗ ಸುಂದರ ಪ್ರದೇಶಗಳಾಗಿವೆ.