ಹಾಸನ: ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ಪಕ್ಷವು ಡಿಜಿಟಲ್ ಸದಸ್ಯತ್ವ ನೋಂದಣಿ ಕಾರ್ಯವನ್ನು ರಾಜ್ಯದಾದ್ಯಂತ ಮಾಡುತ್ತಿದ್ದು, ಜೆಡಿಎಸ್ ಪ್ರಾಬಲ್ಯವಿರುವ ಹಾಸನದಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಿದ್ದು, ಈ ಸಂಬಂಧ ಡಿಜಿಟಲ್ ಸದಸ್ಯತ್ವ ಕಾರ್ಯಾಗಾರ ನಡೆಸುವ ಮೂಲಕ ಕಾರ್ಯಕರ್ತರಿಗೆ ಮಾಹಿತಿ ನೀಡಿದೆ.
ನಗರದ ಹೊರವಲಯದಲ್ಲಿರುವ ನಂದಗೋಕುಲ ಕನ್‌ವೆನ್ಷನ್ ಹಾಲ್ ನಲ್ಲಿ ನಡೆದ ಡಿಜಿಟಲ್ ಸದಸ್ಯತ್ವ ಕಾರ್ಯಗಾರಕ್ಕೆ ಕಾಂಗ್ರೆಸ್ ಪಕ್ಷದ ಹಾಸನ ಜಿಲ್ಲೆಯ ಉಸ್ತುವಾರಿಗಳು ಹಾಗೂ ಸಂಸದರಾದ ಡಿ.ಕೆ. ಸುರೇಶ್ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಚಾಲನೆ ನೀಡಿದ್ದಾರೆ. ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾರ್ಯಕರ್ತರನ್ನು ಕುರಿತು ಮಾಡಿದ ಭಾಷಣವನ್ನು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಿ ಸದಸ್ಯತ್ವ ನೋಂದಣಿಯ ಅರಿವು ಮೂಡಿಸಲಾಯಿತು.
ಕಾರ್ಯಾಗಾರದಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಅವರು, ಈಗಾಗಲೇ ರಾಜ್ಯದ ಅನೇಕ ಕಡೆ ಡಿಜಿಟಲ್ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದೆ. ಶಾಸಕರು, ಜಿಲ್ಲಾ, ತಾಲೂಕು ಪಂಚಾಯತ್ ಸದಸ್ಯರಾಗಬೇಕೆಂದು ಬಯಸುವವರು ಇದರತ್ತ ಗಮನಕೊಡಬೇಕು. ಪ್ರತಿ ಕ್ಷೇತ್ರದಲ್ಲಿ ಸದಸ್ಯರನ್ನು ಆಯ್ಕೆ ಮಾಡುವಾಗ ಅವರ ಪೂರ್ಣ ಮಾಹಿತಿ ಡಿಜಿಟಲ್ ಸದಸ್ಯತ್ವದಿಂದ ಲಭ್ಯವಾಗುತ್ತದೆ. ಇದರಿಂದ ಕುಳಿತಲ್ಲಿಯೇ ಕ್ಷೇತ್ರದ ಮಾಹಿತಿ ಪಡೆಯಬಹುದು. ಪಕ್ಷವನ್ನು ಬಲಗೊಳಿಸಬೇಕು ಎಂದರೇ ಸದಸ್ಯತ್ವ ಅಭಿಯಾನವನ್ನು ಬೂತ್ ಮಟ್ಟದಿಂದ ಕೊಂಡೂಯ್ಯಬೇಕು. ಈ ಬಾರಿ ಹಾಸನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತವರಣ ನಿರ್ಮಾಣವಾಗಿದೆ. ಆದುದರಿಂದ ಸದಸ್ಯತ್ವ ಅಭಿಯಾನವನ್ನು ಪಕ್ಷದ ಎಲ್ಲರೂ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಕಾರ್ಯಾಗಾರದಲ್ಲಿ ಕಾಂಗ್ರೆಸ್ ರಾಜ್ಯ ಮುಖ್ಯ ಸಂಯೋಜಕರಾದ ರಘುನಂದನ್, ರಾಮಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡರಾದ ಬನವಾಸೆ ರಂಗಸ್ವಾಮಿ, ಹೆಚ್.ಕೆ. ಮಹೇಶ್, ದೇವರಾಜೇಗೌಡ, ಬಾಗೂರು ಮಂಜೇಗೌಡ, ಸಣ್ಣಸ್ವಾಮಿ, ಹೆಚ್.ಕೆ. ಜವರೇಗೌಡ, ತಾರಾ ಚಂದನ್, ಹೆಚ್.ಎಸ್. ಆನಂದ್ ಕುಮಾರ್, ರಂಗಸ್ವಾಮಿ, ಯೂತ್ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಗೊರೂರು, ವಿನೋದ್ ಇತರರು ಭಾಗವಹಿಸಿದ್ದರು.