ಎಚ್.ಡಿ.ಕೋಟೆ: ಅರಣ್ಯ ಇಲಾಖೆ ಸಿಬ್ಬಂದಿಗಳ ದೌರ್ಜನ್ಯದಿಂದ ಮೃತಪಟ್ಟ ಆದಿವಾಸಿ ಜೇನು ಕುರುಬ ಜನಾಂಗದ ಕರಿಯಪ್ಪ ಪ್ರಕರಣವನ್ನು ಅತಿಸೂಕ್ಷ್ಮ ಪ್ರಕರಣವೆಂದು ಪರಿಗಣಿಸಿ ಮುಖ್ಯಮಂತ್ರಿಗಳು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತನಿಖಾ ಸಂಸ್ಥೆಗೆ ವಹಿಸಬೇಕೆಂದು ಒತ್ತಾಯಿಸಿ ತಾಲೂಕು ಆದಿವಾಸಿ ಸಂಘಟನೆಗಳು ಶುಕ್ರವಾರ ತಾಲ್ಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿ ಒತ್ತಾಯಿಸಿ ಮುಖ್ಯಮಂತ್ರಿಗಳು ಮತ್ತು ರಾಷ್ಟ್ರಪತಿಗಳಿಗೆ ಕಳುಹಿಸಿಕೊಡುವಂತೆ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರತಿಭಟನಾಕಾರರು ಅಮಾಯಕ ಆದಿವಾಸಿ ಸಮುದಾಯದ ಹೊಸಹಳ್ಳಿ ಹಾಡಿಯ ಕರಿಯಪ್ಪನನ್ನು ಅರಣ್ಯ ಇಲಾಖೆ ನೌಕರರು ವಿಚಾರಣೆ ನೆಪದಲ್ಲಿ ಕರೆದುಕೊಂಡು ಹೋಗಿ ಅರಣ್ಯ ಇಲಾಖೆ ಕಚೇರಿಯಲ್ಲಿ ಹಿಂಸೆ ನೀಡಿ ಲಾಕಪ್ ಡೆತ್ ಕಾರಣರಾಗಿದ್ದಾರೆ, ಪ್ರಕರಣ ನಡೆದು 15ದಿನ ಕಳೆದರೂ ಇದುವರೆಗೂ ಯಾವೊಬ್ಬ ಅಧಿಕಾರಿಯ ಮೇಲೂ ಕ್ರಮವಾಗಿಲ್ಲ, ಆರೋಪಿಗಳನ್ನು ಅಮಾನತು ಕೂಡ ಮಾಡದೇ, ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಮೌನಕ್ಕೆ ಶರಣಾಗಿರುವುದನ್ನು ನೋಡಿದರೇ, ಆರೋಪಿಗಳ ರಕ್ಷಣೆಗೆ ನಿಂತಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಅರಣ್ಯ ಇಲಾಖೆಯ 17 ಜನ ನೌಕರರ ಮೇಲೆ ಅಂತರಸಂತೆ ಪೋಲೀಸ್ ಠಾಣೆಯಲ್ಲಿ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಆದರೆ ಇದುವರೆಗೆ ನೌಕರರ ಮೇಲೆ ಅರಣ್ಯ ಇಲಾಖೆ ಅಮಾನತು ಪಡಿಸುವುದಾಗಲಿ, ಪೊಲೀಸ್ ಇಲಾಖೆ ಬಂಧಿಸುವುದಾಗಲಿ ಮಾಡದೇ, ಪ್ರಕರಣವನ್ನು ಮುಚ್ಚಿ ಹಾಕುವ ಉನ್ನರ ನಡೆಯುತ್ತಿದೆ ಎಂಬ ಅನುಮಾನ ಮೂಡಿದೆ ಎಂದು ಆರೋಪಿಸಿದರು.
ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ ಆದಿವಾಸಿ ಮುಖಂಡರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಆದಿವಾಸಿಗಳ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ತನಿಖೆಯ ಹೆಸರಲ್ಲಿ ಅಮಾಯಕ ಆದಿವಾಸಿ ಮುಖಂಡನ ಸಾವು ನಮ್ಮೆಲ್ಲರಿಗೂ ನೋವು ತಂದಿದೆ, ಕರಿಯಪ್ಪ ವಿಚಾರಣೆ ವೇಳೆ ಮೃತಪಟ್ಟು 15 ದಿನ ಸಮೀಪಿಸುತ್ತಿದ್ದರೂ ಪ್ರಕರಣ ದಾಖಲಾಗಿರುವ ಆರೋಪಿಗಳ ಮೇಲೆ ಕ್ರಮ ಕೈಗೊಳದಿರುವುದು ಬೇಸರ ತರಿಸಿದೆ, ಆದಿವಾಸಿ ಮುಗ್ದ ಕರಿಯಪ್ಪನಿಗೆ ಆದ ರೀತಿ ಇನ್ನೂ ಯಾರಿಗೂ ಅನ್ಯಾಯ ಅಗಬಾರದು ಆ ನಿಟ್ಟಿನಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ತಪ್ಪಿತಸ್ಥ ಆರೋಪಿಗಳ ಮೇಲೆ ಕೂಡಲೇ ಕಾನೂನಡಿ ಕಠಿಣ ಕ್ರಮ ಕೈಗೊಂಡು ಮೃತ ಕರಿಯಪ್ಪನ ಕುಟುಂಬಕ್ಕೆ ಸೂಕ್ತ ನ್ಯಾಯ ಮತ್ತು ಪರಿಹಾರ ನೀಡಬೇಕು ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಜೇನು ಕುರುಬ ಅಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಟಿ.ರಾಜಪ್ಪ, ಭೀಮನಹಳ್ಳಿ ಗ್ರಾ.ಪಂ.ಸದಸ್ಯ ಅಯ್ಯಪ್ಪ, ಆದಿವಾಸಿ ಮುಖಂಡರಾದ ಬಸವಣ್ಣ, ಕಾಳಪ್ಪ, ಚಂದು, ದಸಂಸ ಮುಖಂಡರಾದ ಆನಗಟ್ಟಿ ದೇವರಾಜ್, ಚಾ.ಶಿವಕುಮಾರ್, ವಡ್ಡರಗುಡಿ ಉಮೇಶ್, ಎಡತೊರೆ ನಾಗರಾಜು, ಜಿವಿಕ ಬಸವರಾಜು, ಸಿಪಿಐಎಂ(ಎಲಿ) ಪಕ್ಷದ ಜಿಲ್ಲಾ ಕಾರ್ಯದರ್ಶಿ ವಕೀಲ ಚೌಡಹಳ್ಳಿ ಜವರಯ್ಯ, ಕಂದೇಗಾಲ ಶ್ರೀನಿವಾಸ್, ಭಾಸ್ಕರ, ಗಂಡತ್ತೂರು ದೇವನಹಾಡಿಯ ಕಮಲಮ್ಮ, ಮಾರಿ ಸೇರಿದಂತೆ ನೂರಾರು ಆದಿವಾಸಿ ಮುಖಂಡರು ಇದ್ದರು.