ಹಾಸನ: ರಾಜ್ಯದ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಾವಿರಾರು ಶಿಕ್ಷಕರು ಹಾಗೂ ನೌಕರರಿಗೆ ನಿಶ್ಚಿತ ಪಿಂಚಣಿ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಚ್. ನವೀನ್ ಕುಮಾರ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ನಿವೃತ್ತರಾಗಿರುವ ಎಷ್ಟೋ ಶಿಕ್ಷಕರು ಪಡಬಾರದ ಕಷ್ಟಗಳನ್ನು ಪಡುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಅನುದಾನಿತ ನೌಕರರ ನ್ಯಾಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಸುಮಾರು ೪೦,೦೦೦ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರಾಗಿ ನೌಕರರಾಗಿ ಕೆಲಸ ಮಾಡುತ್ತಿದ್ದು ಜಿಲ್ಲೆಯಲ್ಲಿ ಸುಮಾರು ಎಂಟು ಸಾವಿರ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಇನ್ನು ನೂರಾರು ಮಂದಿ ನಿವೃತ್ತಿ ಹೊಂದಿದ್ದು ಸರ್ಕಾರದ ಉದಾಸಿನ ಧೋರಣೆಯಿಂದಾಗಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಎಲ್ಲಾ ನೌಕರರಿಗೆ ನಿಶ್ಚಿತ ಪಿಂಚಣಿ ಸೌಲಭ್ಯ ನೀಡಬೇಕು ಸರ್ಕಾರಿ ನೌಕರರಿಗೆ ನೀಡುತ್ತಿರುವ ಜ್ಯೋತಿ ಸಂಜೀವಿನಿ ಮತ್ತಿತರ ವೈದ್ಯಕೀಯ ಸೌಲಭ್ಯಗಳನ್ನು ತಾರತಮ್ಯ ಇಲ್ಲದೆ ಅನುದಾನಿತ ನೌಕರರಿಗೂ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಅನ್ಯಾಯವನ್ನು ಖಂಡಿಸಿ ಈಗಾಗಲೇ ರಾಜ್ಯದ್ಯಂತ ಅನೇಕ ಹೋರಾಟಗಳನ್ನು ಮಾಡಲಾಗಿದೆ ಸಂಘದ ತೀರ್ಮಾನದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ಪಿಂಚಣಿ ವಂಚಿತ ನೌಕರರು ೨೦೨೨ ಸಪ್ಟೆಂಬರ್ ೨೦ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪಿಂಚಣಿಗಾಗಿ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಲಾಗಿತ್ತು ೨೦೨೨ ಅಕ್ಟೋಬರ್ ೧೬ ರಂದು ರಾಜ್ಯದ್ಯಂತ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು ನಮ್ಮ ಯಾವುದೇ ಬೇಡಿಕೆ ಸ್ಪಂದಿಸದೆ ಸರ್ಕಾರ ಮೃದು ಧೋರಣೆ ತೋರಿದೆ.
ಫ್ರೀಡಂ ಪಾರ್ಕ್ ನಲ್ಲಿ ಆರಂಭಿಸಿರುವ ಉಪವಾಸ ಸತ್ಯಾಗ್ರಹ ಇದೇ ಜನವರಿ ೧೪ರಂದು ನೂರು ದಿನ ಪೂರ್ಣಗೊಳ್ಳಲಿದ್ದು ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟದ ರೂಪುರೇಷೆಯನ್ನು ಬದಲಾಯಿಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಟೇಶ್, ಮಲ್ಲಿಕಾರ್ಜುನ್, ಆನಂದ್, ಸತೀಶ್ ಇದ್ದರು.