ಅರಕಲಗೂಡು: ದುಡ್ಡಿದು ದಣಿಯಾಗು ಎಂಬ ವಾಕ್ಯದಂತೆ ಬದುಕು ಕಂಡುಕೊಂಡಿರುವ ನನ್ನ ಬಗ್ಗೆ ಕಾಂಗ್ರೆಸ್ ಮುಖಂಡ ದೊಡ್ಡಮಗ್ಗೆ ಕೃಷ್ಣೇಗೌಡ ಆರೋಪ ಮಾಡುತ್ತಿದ್ದಾರೆ. ನಾನು ಉಸಿರು ಬಿಟ್ಟರೇ ಒಂದೇ ದಿನದಲ್ಲೇ ಅವರ ಕ್ರಷರ್ ವ್ಯವಹಾರ ನಿಂತು ಹೋಗುತ್ತದೆ ಎಂದು ಎಚ್ಚರಿಕೆಯನ್ನು ಶಾಸಕ ಎ ಟಿ ರಾಮಸ್ವಾಮಿ ನೀಡಿದ್ದಾರೆ.
ತಾಲ್ಲೂಕಿನ ದೊಡ್ಡಮಗ್ಗೆ ರಂಗಸ್ವಾಮಿ ಮತ್ತು ಶಾಸಕ ಎ ಟಿ ರಾಮಸ್ವಾಮಿ ಅವರ ಸ್ನೇಹ ಸಂಬಂಧ ಜಿಲ್ಲೆಗೆ ಚಿರಪರಿಚಿತ ಆದರೆ ಬದಲಾದ ಸನ್ನಿವೇಶದಲ್ಲಿ ದೊಡ್ಡಮಗ್ಗೆ ರಂಗಸ್ವಾಮಿ ಅವರ ಸಹೋದರ ಕೃಷ್ಣೇಗೌಡ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಚಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕ್ಷೇತ್ರಕ್ಕೆ ಕರೆ ತಂದು ಬೃಹತ್ ಮಟ್ಟದ ಕಾರ್ಯಕ್ರಮ ಆಯೋಜಿಸುವ ಮುಖಾಂತರ ತಾಲ್ಲೂಕಿನ ರಾಜಕಾರಣ ದಲ್ಲಿ ಸಂಚಲನ ಮೂಡಿಸಿದ್ದರು.
ಇದರ ಬೆನ್ನಲ್ಲೇ ಮೂರು ನಾಲ್ಕು ದಶಕದಿಂದ ಸ್ನೇಹಿತರಾದ ದೊಡ್ಡಮಗ್ಗೆ ರಂಗಸ್ವಾಮಿ ಕುಟುಂಬದ ವಿರುದ್ಧ ಶಾಸಕ ಎ ಟಿ ರಾಮಸ್ವಾಮಿ ತಮ್ಮ ಬೆಂಬಲಿಗರ ಸಭೆಯಲ್ಲಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಜನವರಿ ೨೨ ರಂದು ಮಾಜಿ ಪ್ರಧಾನಿ ದೇವೇಗೌಡ ಅವರ ನೇತೃತ್ವದಲ್ಲಿ ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದ ಸಿದ್ಧತೆಯ ಪೂರ್ವಭಾವಿ ಸಭೆಯನ್ನು ಉದೇಶಿಸಿ ಮಾತನಾಡಿದ ಶಾಸಕರು ಕಾರ್ಯಕ್ರಮಕ್ಕೆ ಜನ ಸಾಗರವೇ ಹರಿದು ಬರುವಂತೆ ಕಾರ್ಯಕರ್ತರು ಮುಂಜಾಗ್ರತಾ ಕ್ರಮವನ್ನು ವಹಿಸಬೇಕು ಕ್ಷೇತ್ರದ ಗ್ರಾಮ ಗ್ರಾಮಕ್ಕೆ ತೆರಳಿ ೨೦೧೮ ರಿಂದ ೨೦೨೩ ವರೆಗಿನ ಅಭಿವೃದ್ಧಿ ಕಾಮಗಾರಿ ಬಗ್ಗೆ ಪ್ರಚಾರ ಪಡಿಸಿ ಜನತೆಯ ಮನಮುಟ್ಟುವಂತೆ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಮುಂಬರುವ ಚುನಾವಣೆಯಲ್ಲಿ ಭ್ರಷ್ಟರು ಹಣವಂತರು ಸ್ಪರ್ಧಿಸಿ ಪ್ರಜಾಪ್ರಭುತ್ವ ಆಶಯಗಳನ್ನು ಬುಡಮೇಲು ಮಾಡುವ ಆತಂಕ ಸೃಷ್ಟಿಯಾಗಿದ್ದು ತಾಲ್ಲೂಕಿನ ಜನತೆ ಜಾಗ್ರತೆಯಿಂದ ಚುನಾವಣೆಯಲ್ಲಿ ಮತ ನೀಡಬೇಕು ಎಂದು ಕರೆ ನೀಡಿದರು.
ಪ್ರಾಮಾಣಿಕವಾಗಿ ಬದ್ದತೆಯಿಂದ ಕ್ಷೇತ್ರ ಅಭಿವೃದ್ಧಿ ಮತ್ತು ಜನತೆ ಸೇವೆಯನ್ನು ಮಾಡುತ್ತಿರುವ ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ .
ಅವರ ವಿರುದ್ಧ ನಾನು ಉಸಿರು ಬಿಟ್ಟರೇ ಒಂದೇ ದಿನದಲ್ಲೇ ಅವರ ಕ್ರಷರ್ ವ್ಯವಹಾರ ಸಂಪೂರ್ಣ ನಿಂತು ಹೋಗುತ್ತದೆ ಎನ್ನುವ ಮೂಲಕ ದಶಕ ಕಾಲದ ಸ್ನೇಹಿತರ ಕುಟುಂಬಕ್ಕೆ ಎಚ್ಚರಿಕೆ ನೀಡಿದ್ದು ತಾಲ್ಲೂಕಿನ ರಾಜಕಾರಣದಲ್ಲಿ ಕಂಪನ ಸೃಷ್ಟಿದೆ.