ಹಾಸನ: ಎತ್ತಿನಹೊಳೆ ಯೋಜನೆಗೆ ಬೇಲೂರು ತಾಲ್ಲೂಕಿನ ಐದಳ್ಳ ಕಾವಲು ಗ್ರಾಮದಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ದಂತೆ ಜಿಲ್ಲಾಧಿಕಾರಿ ಎಂ. ಎಸ್. ಅರ್ಚನಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಎತ್ತಿನಹೊಳೆ ಯೋಜನೆಯ ಮುಖ್ಯ ಇಂಜಿನಿಯರ್ ಮಾಧವ್, ಅಧೀಕ್ಷಿಕ ಇಂಜಿನಿಯರ್ ಅನಂದ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್, ವಿಶೇಷ ಭೂಸ್ವಾಧೀನ ಅಧಿಕಾರಿ ಮಾರುತಿ ಮತ್ತಿತರರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಐದಳ್ಳ ಕಾವಲು ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆ ಹಾದು ಹೋಗುವ ಜಾಗವು ಜನವಸತಿ ಪ್ರದೇಶವಾಗಿದ್ದು ಭೂಮಿ ಮಂಜು ರಾತಿಯಾಗಿ ಕೃಷಿ ಚಟುವಟಿಕೆಗಳು ನಡೆಸುತ್ತಿರುವುದರಿಂದ ಹಾಗೂ ಸರ್ಕಾರಿ ಅಧಿಸೂಚನೆಯಂತೆ ಇದೇ ಜಮೀನು ತನ್ನ ವ್ಯಾಪ್ತಿಗೆ ಸೇರಬೇಕೆಂದು ಅರಣ್ಯ ಇಲಾಖೆಯೂ ಸಹ ಪ್ರತಿವಾದಿಸುತ್ತಿರುವುದರಿಂದ ಕಾಮಗಾರಿ ಮುಂದುವರೆಸುವ ಕುರಿತು ಹಾಗೂ ಪರಿಹಾರ ವಿತರಣೆ ಬಗ್ಗೆ ಸರ್ಕಾರಿ ಹಂತದಲ್ಲಿ ನಿರ್ಧಾರ ಕೈಗೊಳ್ಳುವ ಬಗ್ಗೆ ಸೂಕ್ತ ಪ್ರಸ್ತಾವನೆ ನಿಗಧಿಪಡಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಅರ್ಚನಾ ಅವರು ಸೂಚಿಸಿದರು.
ಐದಳ್ಳ ಕಾವಲು ಗ್ರಾಮದ ಭೂಸ್ವಾಧೀನಕ್ಕೆ ಒಳಪಡುವ ಅಂಕಿ ಅಂಶ:- ಭೂಸ್ವಾಧೀನವಾಗುವ ಒಟ್ಟು ವಿಸ್ತೀರ್ಣ ೧೨೭ ಎ-೩೪ ಗು, ಭೂಸ್ವಾಧಿನವಾಗುವ ಒಟ್ಟು ರೈತರು ೬೯ ಜನ , ಆರ್.ಟಿ.ಸಿ ಪ್ರಕಾರ ಹಿಡುವಳಿ ವಿಸ್ತೀರ್ಣ ೧೧೭ ಎ-೩೨ ಗು, ಆರ್.ಟಿ.ಸಿ ಪ್ರಕಾರ ಸರ್ಕಾರಿ ವಿಸ್ತೀರ್ಣ ೧೦ ಎ-೦೨ ಗುಂಟೆ. ಐದಳ್ಳ ಕಾವಲು ಗ್ರಾಮದಲ್ಲಿರುವಂತ ಒಟ್ಟು ವಿಸ್ತೀರ್ಣ ೩೬೧೮.೩೭ ಎಕರೆ, ಅರಣ್ಯ ಭೂಮಿ ೨೨೫೦ ಎಕರೆ, ಸರ್ಕಾರಿ ಭೂಮಿ ೧೧೯೪.೧೨ ಎಕರೆ ಸ್ವಾಧೀನದಾರರ ಭೂಮಿ ೧೭೪.೨೫ ಎಕರೆಗಳಾಗಿವೆ. ಎತ್ತಿನಹೊಳೆ ಯೋಜನೆ ಕಾಮಗಾರಿ ಪ್ರಗತಿಗೆ ಐದಳ್ಳ ಕಾವಲು ಗ್ರಾಮದ ವ್ಯಾಪ್ತಿಯ ಕಾಮಗಾರಿ ಪೂರ್ಣಗೊಳ್ಳುವುದು ಮುಖ್ಯವಾಗಿದ್ದು, ಜಮೀನಿನ ಮಾಲಿಕತ್ವದ ಬಗ್ಗೆ ಇರುವ ಗೊಂದಲ ಶೀಘ್ರ ಇತ್ಯಾರ್ಥ ಪಡಿಸಿಕೊಡುವಂತೆ ಎತ್ತಿನಹೊಳೆ ಯೋಜನೆಯ ಮುಖ್ಯ ಇಂಜಿನಿಯರ್ ಸಭೆಯಲ್ಲಿ ಮನವಿ ಮಾಡಿದರು.
ಸರ್ಕಾರದ ಹಂತದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ತಿರ್ಮಾನ ಅಗತ್ಯವಿರುವುದರಿಂದ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಎತ್ತಿನಹೊಳೆ ಯೋಜನೆ ಭೂಸ್ವಾಧೀನಾಧಿಕಾರಿ ಹಾಗೂ ಇಂಜಿನಿಯರ್ಗಳಿಗೆ ನಿರ್ದೇಶನ ನೀಡಿದರು.