ಹಾಸನ: ಹಾಸನ ಹಾಲು ಒಕ್ಕೂಟವು ೨೦೨೨-೨೩ ನೇ ಸಾಲಿಗೆ ೨೦೦೦ ಕೋಟಿ ವಹಿವಾಟು ನಡೆಸಲು ಅಂದಾಜಿಸಿದ್ದು ಮಾರ್ಚ್-೨೦೨೩ ರ ಅಂತ್ಯಕ್ಕೆ ರೂ. ೨೫ ಕೋಟಿ ಲಾಭ ಗಳಿಸುವ ನಿರೀಕ್ಷೆ ಹೊಂದಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎಚ್.ಡಿ ರೇವಣ್ಣ ತಿಳಿಸಿದರು.
ಒಕ್ಕೂಟದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಸೆಂಬರ್-೨೦೨೨ ರ ಅಂತ್ಯದ ವರೆಗೆ ಸುಮಾರು ರೂ. ೧೫೦೦.೦ ಕೋಟಿ ವಹಿವಾಟು ಆಗಿದ್ದು ರೂ. ೧೯,೨೦ ಕೋಟಿಗಳ ಲಾಭ ಗಳಿಸಿದೆ.
ಒಕ್ಕೂಟವು ಗಳಿಸಿರುವ ಲಾಭವನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸುವ ನಿಟ್ಟಿನಲ್ಲಿ ಕಳೆದ ಡಿ.೧೫ ರಿಂದ ಪ್ರತೀ ಲೀಟರ್ಗೆ ರೂ. ೨.೫೦ ರಂತೆ ಖರೀದಿ ದರ ಹೆಚ್ಚಳ ಮಾಡಿದ್ದು, ಪ್ರಸ್ತುತ ಪ್ರತೀ ಲೀಟರ್ಗೆ ರೂ. ೩೨.೫೦ ರಿಂದ ರೂ. ೩೩ ರವರೆಗೆ ಪಾವತಿಸುತಿಸಲಾಗುತ್ತಿದೆ ಎಂದರು.
ಹಾಲಿನ ಪ್ರೋತ್ಸಾಹಧನ ಪ್ರತೀ ಲೀಟರ್ಗೆ ೫- ರೂ. ಸೇರಿ ಪ್ರತೀ ಲೀ.ಗೆ ರೂ. ೩೭,೫೦ ರಿಂದ ೩೮,೦೦ ದರ ಹಾಲು ಉತ್ಪಾದಕರಿಗೆ ದೊರೆಯುತ್ತಿದ್ದು, ಇದು ಕಹಾಮದ ೧೫ ಹಾಲು ಒಕ್ಕೂಟಗಳ ಪೈಕಿ ಹಾಸನ ಹಾಲು ಒಕ್ಕೂಟವು ಅತೀ ಹೆಚ್ಚಿನ ದರ ಪಾವತಿಸಲಾಗುತ್ತಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ದೇಶಾದ್ಯಂತ ಹಾಲಿನ ಉತ್ಪಾದನೆ ಕುಂಠಿತವಾಗಿದ್ದು, ರಾಜ್ಯದಲ್ಲಿಯೂ ಸಹ ಹಾಲಿನ ಉತ್ಪಾದನೆ ಕಳೆದ ವರ್ಷಕ್ಕೆ ಹೋಲಿಸಿದಾಗ ಹಾಸನ ಹಾಲು ಒಕ್ಕೂಟ ಹೊರತು ಪಡಿಸಿ ಇತರೆ ಒಕ್ಕೂಟಗಳಲ್ಲಿ ಕಡಿಮೆಯಾಗಿರುತ್ತದೆ.
ಹಾಲಿನ ಬೇಡಿಕೆ ಹೆಚ್ಚಾಗಿರುವ ಕಾರಣ ಖಾಸಗಿ ಡೇರಿಗಳು ಹಾಲು ಉತ್ಪಾದಕ ಸಂಘಗಳು ಇಲ್ಲದೇ ಇರುವ ಗ್ರಾಮಗಳಲ್ಲಿ ಹಾಲಿನ ಶೇಖರಣೆ ಮಾಡುವ ಮುಖಾಂತರ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಸದರಿ ಬೆಳವಣಿಗೆ ಮುಂದಿನ ದಿನಗಳಲ್ಲಿ ಸಹಕಾರಿ ವಲಯಕ್ಕೆ ಮಾರಕವಾಗ ಬಹುದಾದ ಹಿನ್ನೆಲೆಯಲ್ಲಿ ಹಾಸನ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಹಾಲಿನ ಸಂಘಗಳು ಇಲ್ಲದೇ ಇರುವ ಗ್ರಾಮಗಳನ್ನು ಗುರುತಿಸಿ ಕೊಂಡು ಪ್ರತಿ ವರ್ಷ ಸುಮಾರು ೨೦೦ ನೂತನ ಸಂಘಗಳ ನ್ನು ಸ್ಥಾಪಿಸುವ ಮುಖಾಂತರ ಮುಂದಿನ ೨-೩ ವರ್ಷಗಳಲ್ಲಿ ಎಲ್ಲಾ ಗ್ರಾಮಗಳಲ್ಲಿಯೂ ಸಹ ಹಾಲಿನ ಉತ್ಪಾದಕ ಸಂಘಗಳನ್ನು ಸ್ಥಾಪಿಸಲು ಒಕ್ಕೂಟದಿಂದ ವಿಶೇಷ ಯೋಜನೆ ರೂಪಿಸಿದ್ದು, ಪ್ರಸಕ್ತ ವರ್ಷದಲ್ಲಿ ಸುಮಾರು ೩೫ ನೂತನ ಸಂಘಗಳನ್ನು ಸ್ಥಾಪಿಸಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ೧೧೭ ನೂತನ ಸಂಘಗಳಿಗೆ ಕಾರ್ಯಚಾಲನೆ ನೀಡಲಾಗಿದೆ ಎಂದು ಹೇಳಿದರು.
ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಂಘಗಳ ಸದಸ್ಯರ ಮಕ್ಕಳು ಗ್ರಾಮೀಣ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ. ೯೦ ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆ ಹೊಂದಿದವರಿಗೆ ಹಾಗೂ ಪಿ.ಯು.ಸಿ. ನಂತರದ ವೃತ್ತಿಪರಕೋರ್ಸ್ಗಳಲ್ಲಿ ವ್ಯಾಸಂಗ ಮುಂದುವರೆಸಿರುವ ವಿದ್ಯಾರ್ಥಿಗಳಿಗೆ ಹಾಮೂಲ್ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ೨೩೦ ಸಂಖ್ಯೆಯಲ್ಲಿದ್ದು ಪ್ರತೀ ವಿದ್ಯಾರ್ಥಿಗೆ ರೂ. ೫,೦೦೦ ರಂತೆ ಪಿ.ಯು.ಸಿ. ವಿದ್ಯಾರ್ಥಿ ಗಳ ಸಂಖ್ಯೆ ೭೭ ಇದ್ದು, ಪ್ರತೀ ವಿದ್ಯಾರ್ಥಿಗೆ ರೂ. ೬,೦೦೦ ರಂತೆ ಹಾಗೂ ನಂತರದ ವೃತ್ತಿಪರಕೋರ್ಸ್ಗಳಲ್ಲಿ ವ್ಯಾಸಂಗ ಮುಂ ದುವರೆಸಿರುವ ಎರಡು ಜನ ಎಂ.ಬಿ.ಬಿ. ಎಸ್. ಹಾಗೂ ಓರ್ವ ಬಿ.ವಿ.ಎಸ್ಸಿ ವಿದ್ಯಾರ್ಥಿಗೆ ತಲಾ ರೂ. ೧೦,೦೦೦ ರಂತೆ ಪ್ರೋತ್ಸಾಹಕ ಮೊತ್ತವನ್ನು ನೀಡಲಾಗುತ್ತಿದ್ದು, ಒಟ್ಟು ೩೧೦ ವಿದ್ಯಾರ್ಥಿಗಳಿಗೆ ಅಂದಾಜು. ೧೬.೫೦ ಲಕ್ಷದಷ್ಟು ಪ್ರೋತ್ಸಾಹಕ ಮೊತ್ತವನ್ನು ಹಾಮೂಲ್ ರೈತ ಕಲ್ಯಾಣ ಟ್ರಸ್ಟ್ ವತಿಯಿಂ ದ ನೀಡಲಾಗುತ್ತಿದೆ ಎಂದು ತಿಳಿಸಿದರು.
ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಗೆ ನೋಂದಣಿಯಾಗಿರುವ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಕುಟುಂಬಗಳಿಗೆ ಪಾವತಿಸಬೇಕಿರುವ ೫೦೦ ರೂ ಪ್ರೀಮಿಯಂ ಮೊತ್ತದಲ್ಲಿ ಶೇ. ೫೦ ರಷ್ಟು ರೂ. ೨೫೦- ಗಳಂತೆ ಒಕ್ಕೂಟದಿಂದ ಸಹಾಯಧನ ನೀಡುತ್ತಿದ್ದು ಇದುವರೆವಿಗೂ ೩೦೦೦೦ ಕುಟುಂಬಗಳು ನೋಂದಣಿಯಾಗಿದ್ದು, ರೂ. ೭೫ಲಕ್ಷ ಸಹಾಯಧನ ಮೊತ್ತವನ್ನು ಫಲಾನುಭವಿಗಳಿಗೆ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಪಾವತಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕೆಎಮ್ ಎಫ್ ವ್ಯವಸ್ಥಾಪಕ ನಿರ್ದೇಶಕ ಸತೀಶ್, ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಇದ್ದರು.