ಹಾಸನ: ಗಾಂಧೀಜಿಯವರ ಅನುಯಾಯಿಯಾಗಿದ್ದ ಕರ್ನಾಟಕದ ಧೀಮಂತ ಮಹಿಳೆ ಯಶೋದಮ್ಮ ದಾಸಪ್ಪ ನೇತೃತ್ವದಲ್ಲಿ ಈ ಕೇಂದ್ರ ಆರಂಭವಾಗಿ ದೆಹಲಿಯ ರಾಜ್‌ಘಾಟ್, ಗುಜರಾತಿನ ಸಬರಾಮತಿ ಆಶ್ರಮ ಹೊರತುಪಡಿಸಿದರೆ ಗಾಂಧೀಜಿ ಚಿತಾಭಸ್ಮವಿರುವ ಏಕೈಕ ಸ್ಥಳ ಅರಸೀಕೆರೆ ಎಂಬುದೇ ಹೆಮ್ಮೆಯ ಸಂಗತಿ.
ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಅಹಿಂಸಾ ಮಾರ್ಗದ ಪ್ರತಿಪಾದಕರಾದ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಇಡೀ ಜಗತ್ತಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಎಲ್ಲರಿಗೂ ಸ್ಪೂರ್ತಿಯ ಸೆಲೆಯಾಗಿರೋ ಮಹಾತ್ಮ ಗಾಂಧೀಜಿ ಅವರು 1948ರಲ್ಲಿ ಗುಂಡಿನ ದಾಳಿಗೆ ಬಲಿಯಾದ ಬಳಿಕ ಅವರ ಚಿತಾಭಸ್ಮವನ್ನು ದೆಹಲಿಯ ರಾಜ್ ಘಾಟ್‌ನಲ್ಲಿಟ್ಟು ಸಂರಕ್ಷಣೆ ಮಾಡಿ ಅಲ್ಲಿ ಗಾಂಧಿ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಅದು ಬಿಟ್ಟರೆ ಹೀಗೆ ಗಾಂಧೀಜಿ ಅವರ ಚಿತಾಭಸ್ಮ ಇರೋ ಕರ್ನಾಟಕದ ಏಕೈಕ ಸ್ಥಳ ಹಾಸನ ಜಿಲ್ಲೆಯ ಅರಸೀಕೆರೆ ನಗರ ಅನ್ನೋದು ಕನ್ನಡಿಗರ ಹೆಮ್ಮೆ. ಅರಸೀಕೆರೆಯ ಗಾಂಧಿ ಸ್ಮಾರಕವನ್ನು ದಕ್ಷಿಣ ಭಾರತದ ‘ರಾಜ್‌ಘಾಟ್’ ಎಂದೇ ಕರೆಯಲಾಗುತ್ತೆ. ಆದರೆ ಗಾಂಧೀಜಿ ಚಿತಾಭಸ್ಮವಿರುವ ಪುಣ್ಯ ಜಾಗಕ್ಕೆ ಸೂಕ್ತ ಮಾನ್ಯತೆ ಸಿಕ್ಕಿಲ್ಲ ಅನ್ನೋ ಕೊರಗು ಇಲ್ಲಿನ ಜನರಿಗೆ ಇದ್ದೇ ಇದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ನಮ್ಮನ್ನ ದಾಸ್ಯಕ್ಕೆ ತಳ್ಳಿದ್ದ ಆಂಗ್ಲರ ವಿರುದ್ದ ಜನರನ್ನು ಅಹರ್ನಿಷಿ ಹೋರಾಟಕ್ಕೆ ಕಟ್ಟಿ, ಶಾಪ ವಿಮೋಚನೆ ಮಾಡಿದ ಮಹಾತ್ಮನನ್ನು ಸ್ಮರಿಸುವ ಅವರ ಹುಟ್ಟಿದ ದಿನ ಅಕ್ಟೋಬರ್ ೨ರಂದು ದೆಹಲಿಯ ರಾಜ್‌ಘಾಟ್‌ನಲ್ಲಿ ನಾನಾ ಕಾರ್ಯಕ್ರಮಗಳು ಹಾಗೂ ರಾಷ್ಟ್ರಮಟ್ಟದ ಕಾರ್ಯಯಕ್ರಮದ ಮೂಲಕ ಸ್ಮರಿಸಲಾಗುತ್ತೆ. ಆದರೆ ರಾಜ್ಯದ ರಾಜ್ ಘಾಟ್ ಎಂದೇ ಪ್ರಸಿದ್ದವಾಗಿರೋ ಅರಸೀಕೆರೆಯ ಗಾಂಧಿ ಸ್ಮಾರಕದಲ್ಲಿ ಮಾತ್ರ ಇಂತಹ ಮಹತ್ವದ ಕಾರ್ಯಕ್ರಮ ನಡೆಯುವೇ ಇಲ್ಲ.
ಕೇವಲ ಸಣ್ಣ ಪ್ರಮಾಣದಲ್ಲಿ, ನಗಣ್ಯವಾಗಿ ಇಲ್ಲಿ ಕಾರ್ಯಕ್ರಮ ಮಾಡಲಾಗುತ್ತೆ. ಅರಸೀಕೆರೆ ನಗರದಿಂದ ಮೈಸೂರಿಗೆ ತೆರಳೋ ರಸ್ತೆಯಲ್ಲಿ ಕೇವಲ ೨ ಕಿ.ಮೀ. ದೂರ ಸಾಗಿದ್ರೆ ಹಬ್ಬನಘಟ್ಟ ಬಳಿ ಕಸ್ತೂರ್‌ಬಾ ಗಾಂಧಿ ಸ್ಮಾರಕ ಟ್ರಸ್ಟ್ ಕಣ್ಣಿಗೆ ಕಾಣುತ್ತೆ. ಸಾಕಷ್ಟು ವಿಶಾಲವಾದ ಜಾಗದಲ್ಲಿ ಹರಡಿಕೊಂಡಿರೋ ಗಾಂಧಿ ಸ್ಮಾರಕ ಟ್ರಸ್ಟ್ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ದಿ ಆಗಿಲ್ಲ. ಸರ್ಕಾರ ಇನ್ನಾದರೂ ಇದಕ್ಕೆ ಆದ್ಯತೆ ನೀಡಬೇಕು ಅನ್ನೋದು ಸ್ಥಳೀಯರ ಒತ್ತಾಯವಾಗಿದೆ.
ಗಾಂಧಿ ಸ್ಮಾರಕದಲ್ಲಿ ಗಾಂಧೀಜಿ ಮತ್ತು ಕಸ್ತೂರ್‌ಬಾ ಅವರ ಜೀವನ ಚರಿತ್ರೆ ತಿಳಿಸುವ ದಂಡಿಯಾತ್ರೆಯ ೮ ಶಿಲ್ಪಗಳ ಕಲಾಕೃತಿ, ಕಸ್ತೂರ್‌ಬಾ ಅವರು ಚರಕದಿಂದ ನೂಲು ತೆಗೆಯುತ್ತಿರೋ ೮ ಅಡಿ ಎತ್ತರದ ಪುತ್ಥಳಿ, ಕಸ್ತೂರ್‌ಬಾ ಮತ್ತು ಗಾಂಧೀಜಿಯವರು ೧೯೧೫ರ ಸ್ವಾತಂತ್ರ್ಯಪೂರ್ವದಲ್ಲಿ ಭಾರತಕ್ಕೆ ಆಗಮಿಸಿದ್ದಾಗಿನ ಜೋಡಿ ಚಿತ್ರಗಳು, ಧ್ಯಾನಾಸಕ್ತ ಗಾಂಧೀಜಿ, ಕಸ್ತೂರ್‌ಬಾ ತಮ್ಮ ಮೊಮ್ಮಕ್ಕಳ ಜೊತೆ ಇರುವ ಕಲಾಕೃತಿ, ಗಾಂಧೀಜಿ ಅವರು ತಮ್ಮ ಸಹಾ ಯಕರಾದ ಅನು ಮತ್ತು ಅಬ್ಬಾ ಅವರೊಂದಿಗೆ ಇರುವ ಪ್ರತಿಕೃ ತಿಗಳು ಹೀಗೆ ಹತ್ತಾರು ಆಕರ್ಷಣೆಗಳು ಇಲ್ಲಿದ್ದರೂ ಇಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲ. ಪ್ರವಾಸೋದ್ಯ ಮದ ಬಗ್ಗೆ ಪ್ರಚಾರ ಇಲ್ಲದೆ ಜನರೂ ಕೂಡ ಇತ್ತ ಸುಳಿಯೋ ದಿಲ್ಲ ಗಾಂಧೀಜಿಯವರ ಜೀವನ ಸಾಧನೆ ಹೋರಾಟವನ್ನು ಇಂದಿನ ಪೀಳಿಗೆಗೆ ತಿಳಿಸೋ ದೃಷ್ಟಿಯಿಂದ ಗಾಂಧಿ ಸ್ಮಾರಕ ಮತ್ತಷ್ಟು ವ್ಯವಸ್ಥೆಯೊಂದಿಗೆ ಅಭಿವೃದ್ದಿ ಆಗಬೇಕಿದೆ.
ಸ್ಮಾರಕದ ಹಿಂದೆ ಇದೆ ಮಹಿಳೆಯೊಬ್ಬರ ಪರಿಶ್ರಮ: 1946ರಲ್ಲಿ ಕಸ್ತೂರ್‌ಬಾ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅನ್ನು ಗ್ರಾಮೀಣ ಪ್ರದೇಶಗಳ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಾಧಿಸಲು, ಆಸ್ಪತ್ರೆಗಳು, ವೃದ್ಧಾಶ್ರಮ, ಶಾಲೆಗಳು, ಮಹಿಳೆಯರ ಸಬಲೀಕರಣಕ್ಕೆ ಈ ಟ್ರಸ್ಟ್‌ನ್ನು ಸ್ಥಾಪಿಸಲಾಗಿತ್ತು. ಅಂದು ಎಚ್. ದಾಸಪ್ಪ ಅವರು ಕೇಂದ್ರದ ಸಚಿವರಾಗಿದ್ದ ಸಂದರ್ಭ ಅವರ ಪತ್ನಿ ಯಶೋಧರ ದಾಸಪ್ಪ ಅವರು ಕೂಡ ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದು, ಗಾಂಧೀಜಿ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಅವರು ರಾಜ್ಯ ಸರಕಾರದಿಂದ ೧೯೪೭ರಲ್ಲಿ ಅರಸೀಕೆರೆಯ ಈ ಸ್ಥಳದಲ್ಲಿ ಸುಮಾರು ೮೫ ಎಕರೆ ಜಾಗವನ್ನು ಟ್ರಸ್ಟ್‌ನ ಸ್ಥಾಪನೆಗಾಗಿ ಮಂಜೂರು ಮಾಡಿಸಿಕೊಂಡಿದ್ದರು.
ನಂತರ ೧೯೪೮ ರಲ್ಲಿ ಗಾಂಧೀಜಿ ಅವರು ಮರಣ ಹೊಂದಿದ ನಂತರ ಅವರ ಚಿತಾಭಸ್ಮವನ್ನು ದಿಲ್ಲಿಯಿಂದ ಇಲ್ಲಿಗೆ ತಂದು ಒಂದು ಸಮಾಧಿಯನ್ನೂ ನಿರ್ಮಾಣ ಮಾಡಿದರು. 1944ರಲ್ಲಿ ಆರಂಭಗೊಂಡ ಈ ಸಂಸ್ಥೆ ಮಧ್ಯಪ್ರದೇಶದ ಇಂದೋರಿನಲ್ಲಿರುವ ಕಸ್ತೂರ್ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಂಗ ಸಂಸ್ಥೆಯಾಗಿದೆ. ಇದು ದೇಶಾದ್ಯಂತ ೨೭ ಕೇಂದ್ರಗಳನ್ನು ಹೊಂದಿದೆ. ಗಾಂಧೀಜಿ ಯವರ ಅನುಯಾಯಿಯಾಗಿದ್ದ ಕರ್ನಾಟಕದ ಧೀಮಂತ ಮಹಿಳೆ ಯಶೋದಮ್ಮ ದಾಸಪ್ಪ ನೇತೃತ್ವದಲ್ಲಿ ಈ ಕೇಂದ್ರ ಆರಂಭವಾಗಿ ದೆಹಲಿಯ ರಾಜ್‌ಘಾಟ್, ಗುಜರಾತಿನ ಸಬರಾಮತಿ ಆಶ್ರಮ ಹೊರತುಪಡಿಸಿದರೆ ಗಾಂಧೀಜಿ ಚಿತಾಭಸ್ಮವಿರುವ ಏಕೈಕ ಸ್ಥಳ ಅರಸೀಕೆರೆ ಎಂಬುದೇ ಹೆಮ್ಮೆಯ ಸಂಗತಿ.
ಹಾಗಾಗಿಯೇ ಇದನ್ನು ೩ನೇ ರಾಜ್ ಘಾಟ್ ಎಂದು ಕರೆಯಲಾಗುತ್ತದೆ. ಗಾಂಧೀಜಿ ಅವರ ಚಿತಾಭಸ್ಮವನ್ನು ತಂದು ಸಮಾಧಿ ನಿರ್ಮಿಸಲಾಗಿದೆ. ಇಲ್ಲಿ ಗಾಂಧೀಜಿಯವರ ಸಂದೇಶಗಳನ್ನು ಸಾರಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಈ ಕೇಂದ್ರದಲ್ಲಿ ಕೆಲ ಸಂಘ ಸಂಸ್ಥೆಗಳಿಂದ ಗಾಂಧೀಯವರನ್ನು ಸ್ಮರಿಸುವ ಹಲವು ಚಟುವಟಿಕೆಗಳು ಆರಂಭಗೊಂಡಿವೆಯಾದರೂ ಇಲ್ಲಿ ಸ್ಮಾರಕ ಇರುವ ಬಗ್ಗೆ ಸಮರ್ಪಕ ಪ್ರಚಾರದ ಕೊರತೆಯಿಂದ ದೇಶದ ಮೂರನೇ ರಾಜ್ ಘಾಟ್, ದಕ್ಷಿಣದ ರಾಜ್ ಘಾಟ್ ಎಂದು ಕರೆಸಿಕೊಳ್ಳುವ ಮಹಾತ್ಮ ಗಾಂಧಿ ಅವರನ್ನು ಸ್ಮರಿಸೋ ಪ್ರಮುಖ ಸ್ಥಳ ಜನರಿಂದ ದೂರವಾಗಿದೆ. ಸರ್ಕಾರ ಈ ಕೇಂದ್ರವನ್ನ ಅಭಿವೃದ್ದಿ ಮಾಡುವುದರ ಜೊತೆಗೆ ಈ ಕೇಂದ್ರದ ಮೂಲಕ ಗಾಂಧಿ ವಿಚಾರಧಾರೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸೋ ಕೆಲಸ ಮಾಡಬೇಕು ಅನ್ನೋದೆ ಎಲ್ಲರ ಆಶಯವಾಗಿದೆ.