ಹಾಸನ: ಜೆಡಿಎಸ್ ಭದ್ರಕೋಟೆ ಹಾಸನ ಜಿಲ್ಲೆಯಲ್ಲಿ ತಳಮಳ ಶುರುವಾಗಿದೆ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿರುವಾಗಲೇ ಮತ್ತೊಂದು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗೊಂದಲ ಶುರುವಾಗಿದೆ.
ಹಾಲಿ ಶಾಸಕ ಕೆಎಂ ಶಿವಲಿಂಗೇಗೌಡ ಹಲವು ತಿಂಗಳುಗಳಿಂದ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದು ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಪಕ್ಷ ಸೇರುತ್ತಾರೆ ಎಂಬ ವದಂತಿಗಳು ದಟ್ಟವಾಗಿ ಹಬ್ಬಿದ್ದು, ಶಿವಲಿಂಗೇಗೌಡರ ಆಪ್ತ ಮೂಲಗಳು ಇದನ್ನು ನಿಜ ಎನ್ನುತ್ತಿವೆ. ಇದರ ನಡುವೆ ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಹೆಚ್‌ಡಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಎಂಎಲ್‌ಸಿ ಸೂರಜ್ ರೇವಣ್ಣ ನಿರಂತರವಾಗಿ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸುತ್ತಿದ್ದಾರೆ.
ಬುಧವಾರ ಅರಸೀಕೆರೆಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಸಭೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ನಮಗೆ ವಿಶ್ವಾಸವಿದೆ, ಶಿವಲಿಂಗೇಗೌಡರು ಇಲ್ಲೇ ಉಳಿದುಕೊಂಡರೆ ಸುಲಭವಾಗಿ ಗೆಲ್ಲುತ್ತಾರೆ. ಅಲ್ಲಿ ಹೋಗೋದು ಅವರ ಇಷ್ಟ. ನಮ್ಮ ಪಕ್ಷದ ಕಾರ್ಯಕ್ರಮ, ನಮ್ಮ ಹೋರಾಟ ನಾವು ಮಾಡಬೇಕಾಗುತ್ತದೆ ಸಾಕಷ್ಟು ಬಾರಿ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ನಾವು ಎಲ್ಲೇ ಹೋದರು, ಯಾವುದೇ ಸಾರ್ವಜನಿಕ ಕಾರ್ಯಕ್ರಮಕ್ಕೆ ಹೋದರು ನಾವು ತಟಸ್ಥವಾಗಿಯೇ ಮಾತನಾಡಿದ್ದೇವೆ. ಎಲ್ಲೂ ಕೂಡ ಶಾಸಕರ ಬಗ್ಗೆ ಯಾವುದೇ ರೀತಿಯಾದ ಹೇಳಿಕೆಗಳನ್ನು ಕೊಟ್ಟಿಲ್ಲ. ಯಾವುದೇ ರೀತಿ ಅವರಿಗೆ ತೊಂದರೆ ಆಗುವ ಹಾಗೆ ನಡೆದುಕೊಂಡಿಲ್ಲ, ಮುಂದೆಯೂ ಅದೇ ರೀತಿ ನಡೆದುಕೊಳ್ಳುತ್ತೇವೆ ಎಂದಿದ್ದಾರೆ.
ಚುನಾವಣೆ ಬಂದರೂ ಅಷ್ಟೇ, ಚುನಾವಣೆ ನಂತರವೂ ಅಷ್ಟೇ, ಶಾಸಕರ ಬಗ್ಗೆ ನಾವೆಲ್ಲೂ ಪ್ರತಿಕ್ರಿಯೆ ಕೊಡಲ್ಲ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷದಿಂದಲೇ ಶಕ್ತಿ ಪಡೆದುಕೊಂಡು, ಪಕ್ಷದಿಂದಲೇ ೩ ಬಾರಿ ಶಾಸಕರಾಗಿ ಕಾರ್ಯಕರ್ತರು ಹಾಗೂ ನಗರಸಭೆ ಸದಸ್ಯರ ವಿಶ್ವಾಸ ಉಳಿಸಿಕೊಂಡಿದ್ದಾರೆ. ಅವರಿಗೆ ಪಕ್ಷದ ಮೇಲೆ ವಿಶ್ವಾಸವಿದೆ. ಪಕ್ಷದಲ್ಲೇ ಇರುತ್ತಾರೆ, ಇರಲೂ ಬಯಸುತ್ತಿದ್ದಾರೆ. ಅವರು ಪಕ್ಷದಲ್ಲೇ ಉಳಿದು ಪಕ್ಷಕ್ಕಾಗಿ ದುಡಿಯುತ್ತಾರೆ. ಆ ನಂಬಿಕೆ ನಮಗಿದೆ ಎಂದು ಹೇಳಿದ್ದಾರೆ.
ಅರಸೀಕೆರೆಯಲ್ಲಿ ಫೆಬ್ರವರಿ ೩ ರಂದು ಕಾರ್ಯಕರ್ತರ ಸಭೆ ಹಾಗೂ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಕಾರ್ಯಕ್ರಮ ಮುಂದೂಡಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಹಾಸನ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ. ಕುಮಾರಣ್ಣ ಅವರು ಬೀದರ್, ವಿಜಯಪುರ, ಉತ್ತರ ಕರ್ನಾಟಕ ಭಾಗದಲ್ಲಿ ಪಂಚರತ್ನ ಯಾತ್ರೆ ಮಾಡುತ್ತಿದ್ದಾರೆ. ಒಂದು ವಾರ ಅವರು ಸ್ವಲ್ಪ ರೆಸ್ಟ್ ತೆಗೆದುಕೊಳ್ಳಲಿ. ಆನಂತರ ಮಂಡ್ಯ, ಮೈಸೂರು, ಚಿಕ್ಕಮಗಳೂರು, ನಮ್ಮ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ಕಾರ್ಯಕ್ರಮ ನಡೆಯಬೇಕಿದೆ. ಅದನ್ನು ೨ನೇ ಹಂತದಲ್ಲಿ ಶುರು ಮಾಡುತ್ತಾರೆ ಎಂದರು.