News Kannada
Saturday, April 01 2023

ಹಾಸನ

ಹಾಸನ: ಜೆಡಿಎಸ್ ಮಾಸ್ಟರ್ ಪ್ಲಾನ್, ವಿರೋಧಿ ಪಾಳಯದಲ್ಲಿ ತಲ್ಲಣ

Hassan: Jd(S) master plan: Anti-incumbency camp in turmoil
Photo Credit : News Kannada

ಹಾಸನ: ಟಿಕೆಟ್ ವಿಚಾರದಲ್ಲಿ ಇಡೀ ರಾಜ್ಯದ ಗಮನ ಸೆಳೆದಿರೋ ಹಾಸನ ದಲ್ಲಿ ಅಂತೆ ಕಂತೆಗಳ ಮಹಾಪೂರಾನೇ ಹರಿಯುತ್ತಿದೆ. ಅದರಲ್ಲೂ ಜೆಡಿಎಸ್ ಗರಡಿಮನೆಯತ್ತ ಚಿತ್ತ ನೆಟ್ಟಿರುವ ಚುನಾವಣಾ ಪಂಡಿತರು ಪಕ್ಕಾ ಲೆಕ್ಕಾಚಾರ ಮಾಡದೇ ತಲೆ ಕೆರೆದುಕೊಳ್ಳುತ್ತಿದ್ದಾರೆ ಅನ್ನೋದೇ ವಿಶೇಷ. ? ಗೌಡರ ಸೊಸೆ ಭವಾನಿ ಅಕ್ಕ ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯೋದಿಲ್ಲ ಅಂತಾ ಪಟ್ಟು ಹಿಡಿದಿದ್ದಾರೆ. ಕುಟುಂಬ ರಾಜಕಾರಣ ಅನ್ನೋ ಅಪವಾದ ಚರ್ಚೆಗೆ ಗ್ರಾಸವಾಗುತ್ತೆ ಅನ್ನೋ ಕಾರಣಕ್ಕೆ ಮಾಜಿ ಮುಖ್ಯಾಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಇದಕ್ಕೆ ಒಪ್ಪುತ್ತಿಲ್ಲ..? ಅನ್ನೋದು ಈಗ ಹಳೇಯ ವಿಚಾರ. ಸೊಸೆಯ ಹಠಕ್ಕೆ ಶರಣಾಗಿರೋ ಗೌಡರು ಸ್ಪರ್ಧೆಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಭವಾನಿ ಮೇಡಮ್ ಈ ಬಾರಿ ಎಲೆಕ್ಷನ್ ಗೆ ನಿಲ್ಲೋಧು ಗ್ಯಾರೆಂಟಿ ಅನ್ನೋ ಅಪ್ಡೇಟೆಡ್ ವರ್ಷನ್ ಈಗ ಚರ್ಚೆಯಲ್ಲಿದೆ. ಈ ವಿಚಾರಕ್ಕೆ ಒಮ್ಮೊಬ್ಬರು ಒಂದೊಂದು ರೀತಿಯ ಬಣ್ಣ ಹಚ್ಚಿ ರಂಗೇರಿಸುತ್ತಿದ್ದಾರೆ, ಬಹಳಷ್ಟು ಮಂದಿ ತಮ್ಮ ಪಾಂಡಿತ್ಯಕ್ಕೆ ಅನುಗುಣವಾಗಿ ರಾಜಕೀಯದ ರಸದೌತಣ ಬಡಿಸುತ್ತಿದ್ದಾರೆ. ಕೆಲವರಂತೂ ಈಗಾಗಲೇ ಅಭ್ಯರ್ಥಿಯ ಗೆಲುವಿನ ಅಂತರವನ್ನೂ ಊಹಿಸುವಷ್ಟರ ಮಟ್ಟಿಗೆ ಮುಂದುವರೆದಿದ್ದಾರೆ.

ಇಂತಹ ಬಹು ಚರ್ಚಿತ ವಿಷಯದ ಜೊತೆಗೆ ಅರಕಲಗೂಡು ಕ್ಷೇತ್ರ ಮತ್ತೆ ಸುದ್ದಿಯಲ್ಲಿದೆ. ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರುತ್ತಾರಂತೆ ಅನ್ನೋ ಊಹಾಪೋಹಕ್ಕೆ ಸಂಪೂರ್ಣ ತೆರೆ ಎಳೆದಿರೋ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ? ಮಂಜು ಅವರೇ ನಮ್ಮ ಮುಂದಿನ ಅಭ್ಯರ್ಥಿ ಎಂದು ಘಂಟಾಘೋಷವಾಗಿ ಹೇಳಿರುವುದು ಎಲ್ಲರನ್ನೂ ನಿಬ್ಬೆರಗಾಗಿಸಿದೆ. ? ತೆಂಕಣದ ಬಡಗಣ ಒಂದಾಗುವ ಕಾಲ ಬಂದಾಯ್ತು, ಮೂಡಣದಿಂದ ಪಡುವಣಕ್ಕೆ ಗಾಳಿ ಬೀಸೋಕೆ ಶುರುವಾಯ್ತ ಎಂಬತಹ ಸನ್ನಿವೇಶ ಇದು.

ಜೆಡಿಎಸ್ ನ ಮೇರು ದಿಗ್ಗಜರಾಗಿದ್ದ ಅರಸೀಕೆರೆಯ ಕೆ.ಎಂ ಶಿವಲಿಂಗೇಗೌಡ, ಅರಕಲಗೂಡಿನ ಎ.ಟಿ ರಾಮಸ್ವಾಮಿ ಅಂತರ ಕಾಯ್ದುಕೊಂಡಿದ್ದಾರೆ, ಬದಲಾದ ಕಾಲಘಟ್ಟದಲ್ಲಿ ಅವರು ಕಾಂಗ್ರೆಸ್ ಸೇರೋದು ಖಚಿತ ಎನ್ನುತ್ತಿರುವಾಗಲೇ ಜೆಡಿಎಸ್ ಪಾಳಯದಿಂದ ಭಾರೀ ದಾಳಗಳನ್ನ ಉರುಳಿಸಲಾಗಿದೆ. ಪಕ್ಷ ನಿಷ್ಟರಾಗಿದ್ದವರು ಇದ್ದಕ್ಕಿದ್ದಂತೇ ಕೈ ಕೊಡುತ್ತಾರೆ ಎನ್ನುವ ಮುನ್ಸೂಚನೆ ಇದ್ದ ಹೆಚ್.ಡಿ ಕುಮಾರಸ್ವಾಮಿ ಹಾಗೂ ಹೆಚ್.ಡಿ ರೇವಣ್ಣ ಕೈ ಕಟ್ಟಿ ಕುಳಿತಿರಲಿಲ್ಲ ಅನ್ನೋದು ಈಗ ಸ್ಷಷ್ಟ. ಡ್ಯಾಮೇಜ್ ಕಂಟ್ರೋಲ್ಗೆ ಮುಂಚಿನಿಂದಲೇ ಜಾಲ ಹೆಣೆದಿದ್ದ ಅವರು ಪಕ್ಷ ಬಿಟ್ಟವರು ತಡವರಸಿ ನೋಡಿಕೊಳ್ಳುವಂತಹ ರಣ ಪೆಟ್ಟು ನೀಡಿ ಚಾಣಾಕ್ಷತೆ ಮೆರೆದಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ನಡೆಯುವ ಪಕ್ಷಾಂತರ ಪರ್ವಗಳು ಒಂದಲ್ಲಾ ಒಂದು ಬದಲಾವಣೆಗೆ ಕಾರಣ ಆಗುವುದರಲ್ಲಿ ಸಂದೇಹವೇ ಇಲ್ಲ. ಜೆಡಿಎಸ್ ಪಾಲಿಗೆ ಇದನ್ನು ಅವಲೋಕನ ಮಾಡುವುದಾದರೆ ಅರಕಲಗೂಡಿನಿಂದ ಜೆಡಿಎಸ್ ತೆಕ್ಕೆಗೆ ಜಾರಿರುವ ಮಾಜಿ ಸಚಿವ ಜೆಡಿಎಸ್ ಪಾಲಿಗೆ ಬೂಸ್ಟರ್ ಡೋಸ್ ಆಗುವುದಂತೂ ಖಚಿತ. ತಮ್ಮದೇ ಆದ ಬೆಂಬಲಿಗ ಪಡೆಯನ್ನ ಹೊಂದಿರುವ ಎ.ಮಂಜು ಕ್ಷೇತ್ರದ ಮಟ್ಟಿಗೆ ಪ್ರಭಾವಿ ಹಾಗೂ ಶಕ್ತಿಶಾಲಿ ಅಭ್ಯರ್ಥಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇತ್ತ ಸಜ್ಜನ ಪ್ರಾಮಾಣಿಕ ರಾಜಕಾರಣಿ ಎಂದೇ ಖ್ಯಾತರಾಗಿದ್ದ ಎ.ಟಿ ರಾಮಸ್ವಾಮಿಯವರ ಸುತ್ತಮುತ್ತ ಇದ್ದಕ್ಕಿದ್ದಂತೇ ಅಪಸ್ವರಗಳು ಹೆಚ್ಚುತ್ತಿವೆ. ಅರಕಲೂಡು ಕ್ಷೇತ್ರವನ್ನ ಸೂಕ್ಷ್ಮವಾಗಿ ತೆಗೆದುಕೊಂಡಿರುವ ಜೆಡಿಎಸ್ ಮುಖಂಡರು ಇವೆಲ್ಲವನ್ನೂ ಸರಿದೂಗಿಸುವ ಉದ್ದೇಶದಿಂದಲೇ ಎ. ಮಂಜುಗೆ ರೆಡ್ ಕಾರ್ಪೆಟ್ ಹಾಸಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೇ ಎ,ಮಂಜುರವರು ಕೂಡ ಇಲ್ಲಿ ಪ್ರಬಲ ಸ್ಪರ್ಧೆ ನೀಡುವುದರಲ್ಲಿ ಅನುಮಾನವೇ ಇಲ್ಲ.

See also  ಹಠಮಾರಿತನದ ತಂತ್ರಗಳು ಮತ್ತು ಮಕ್ಕಳಲ್ಲಿ ಅದರ ನಿಯಂತ್ರಣ

ಬೇಲೂರು ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಮಿಂಚಿನ ಸಂಚಾರ

ಪಕ್ಷಗಳ ಪಕ್ಷ ಸಂಘಟನೆ, ಸಣ್ಣಪುಟ್ಟ ಕಾರ್ಯಕ್ರಮ ಇತ್ಯಾದಿಗಳಿಗೆ ಮಾತ್ರ ಸೀಮಿತವಾಗಿದ್ದ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದೇಶ್ ನಾಗೇಂದ್ರ ಅನ್ನೋ ಹೆಸರು ಕಳೆದ ಹಲವು ದಿನಗಳಿದಂದ ಪ್ರತಿಧ್ವನಿಸುತ್ತಿದೆ. ಬೇಲೂರು ಉತ್ಸವ ಸೇರಿದಂತೆ ಹಲವಾರು ಸಮಾಜಪರ ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರು ಜನರ ಮನ ಗೆಲ್ಲುವ ಯತ್ನದಲ್ಲಿದ್ದಾರೆ. ಹಾಸನದ ಪ್ರಭಾವಿ ಶಾಸಕ ಪ್ರೀತಮ್ ಗೌಡರಿಗೆ ಒಡನಾಡಿಯಾಗಿರುವ ಸಿದ್ದೇಶ್ ನಾಗೇಂದ್ರ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಳೆದ ಐದು ವರ್ಷಗಳಿಂದ ಇಲ್ಲಿ ಹುಲ್ಲಹಳ್ಳಿ ಸುರೇಶ್ ಸಕ್ರಿಯರಾಗಿ ಇರುವ ಕಾರಣ ಸಿದ್ದೇಶ್ ನಾಗೇಂದ್ರ ರಿಗೆ ಟಿಕೆಟ್ ಸಿಗುವುದು ಅನುಮಾನ. ಶತಾಯಗತಾಯ ಈ ಕ್ಷೇತ್ರದ ಅಭ್ಯಕರ್ಥಿಯಾಗಲೇಬೇಕು ಎನ್ನುವ ಹಠಕ್ಕೆ ಬಿದ್ದಂತಿರುವ ಸಿದ್ದೇಶ್ ರವರು ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡುತ್ತಿರುವಂತೆಯೇ ಸಿದ್ದೇಶ್ ನಾಗೇಂದ್ರ ಅವರನ್ನು ಜೆಡಿಎಸ್ ನಾಯಕರು ಸದ್ದಿಲ್ಲದೆ ಸಂಪರ್ಕಿಸಿ ತಮ್ಮತ್ತ ಸೆಳೆದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಆತಂಕಗೊಂಡಿದ್ದಾರೆಯೇ ಕೆ.ಎಂ.ಶಿ ಹಾಗೂ ಎ.ಟಿ.ಆರ್..?

ಇಂತಹ ಅನಿರೀಕ್ಷಿತ ಬೆಳವಣಿಗೆಗಳು ಎ.ಟಿ.ಆರ್ ಹಾಗೂ ಕೆ.ಎಂ.ಶಿ ಮನಸ್ಸಿನಲ್ಲಿ ದಿಗಿಲು ಹುಟ್ಡಿಸಿರಬಹುದು ಅನ್ನೋದು ಕೂಡ ಚರ್ಚೆಯಲ್ಲಿದೆ. ಇದಕ್ಕೆ ಪೂರಕ ಎಂಬಂತೆ ಕಳೆದ ಕೆಲ ದಿನಗಳ ಹಿಂದೆ ಎ.ಟಿ,ಆರ್ ಕೂಡ ? ನಾನು ಜೆಡಿಎಸ್ ಪಕ್ಷ ಬಿಡುವ ಕುರಿತು ನಿರ್ಧಾರ ಕೈಗೊಂಡಿರಲಿಲ್ಲ, ಭಿನ್ನಾಭಿಪ್ರಾಯದ ಕಾರಣ ಅಂತರ ಕಾಯ್ದುಕೊಂಡಿದ್ದ ಎನ್ನುವ ಮಾತನ್ನಾಡಿದ್ದಾರೆ. ಇನ್ನು ಮುಂದುವರೆದಂತೆ ರಾಜ್ಯದಲ್ಲಿ ಸಮ್ಮಿಶ್ರ ಸರಕಾರವೇನಾದರೂ ರಚನೆಯಾದರೆ ಜೆಡಿಎಸ್ ಗೆ ಕೈ ಕೊಟ್ಟವರ ಪರಿಸ್ಥಿತಿ ಕೂಡ ಅತಂತ್ರವಾಗಲಿದೆ ಅನ್ನೋದು ಅನುಭವಿಗಳ ಲೆಕ್ಕಾಚಾರ. ಒಟ್ಟಾರೆ ಎಲ್ಲಾ ಬೆಳವಣಿಗೆಗಳು ಒಂದು ಹಂತದಲ್ಲಿ ನಿತ್ರಾಣ ಸ್ಥಿತಿ ತಲುಪಿದ್ದ ಜಿಲ್ಲಾ ಜೆಡಿಎಸ್ ನಲ್ಲಿ ಹೊಸ ಸಂಚಲನ ಮೂಡಿಸಿದೆ ಅನ್ನೋದಂತೂ ಸತ್ಯ.

ಬಿ.ಶಿವರಾಂಗೆ (ನವಗ್ರಹ).!!? ಕಾಟ

ಮತ್ತೊಂದೆಡೆ ಬೇಲೂರು ಕಾಂಗ್ರೆಸ್ನಲ್ಲೂ ಏನೇನೂ ಸರಿ ಇಲ್ಲಾ ಎನ್ನುವ ಪರಿಸ್ಥಿತಿ. ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿರೋ ಬಿ.ಶಿವರಾಂಗೆ ಅವರ ಆಪ್ತ ಒಂಬತ್ತು ಮಂದಿಯೇ ಗ್ರಹಗ ಳಾಗಿ ಕಾಡಲಿದ್ದಾರೆ ಅನ್ನೋ ಮಾತಿದೆ. ಇಲ್ಲಿ ಗ್ರಾನೈಟ್ ರಾಜಶೇಖರ್ ಹಾಗೂ ಕೃಷ್ಣೇಗೌಡ ಕೂಡ ಪ್ರಬಲ ಆಕಾಂಕ್ಷಿಗಳು. ಅಂತಿಮ ಕ್ಷಣದಲ್ಲಿ ಇವರಿಬ್ಬರೂ ಪರಸ್ಪರ ಒಪ್ಪಂದದ ಮೇರೆಗೆ ಯಾರಾದರೂ ಒಬ್ಬರು ಕಣಕ್ಕಿಳಿಯುವ ಪ್ರಯತ್ನ ಮಾಡಬಹುದು. ಇದಕ್ಕೆ ಮಾಜಿ ಶಾಸಕ ದಿವಂಗತ ರುದ್ರೇಶಗೌಡರ ಕುಟುಂಬ ಹಾಗೂ ಬಳಗದವರು ಬೆಂಬಲ ನೀಡಬ ಹುದು ಎಂದು ಅವಲೋಕಿಸಲಾಗುತ್ತಿದೆ.

ಜೆಡಿಎಸ್ ಮಾಸ್ಟರ್ ಪ್ಲ್ಯಾನ್

ಜೆಡಿಎಸ್ನ ಸರಳ, ಸಜ್ಜನ, ಜನಪರ ಧೋರಣೆಯ ಶಾಸಕ ಲಿಂಗೇಶ್ ರ ಕುರಿತು ಕ್ಷೇತ್ರದಲ್ಲಿ ಉತ್ತಮ ಅಭಿಪ್ರಾಯವೇನೋ ಇದೆ. ಆದರೆ ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅವರಿಂದ ಸಾಧ್ಯವಾಗಿಲ್ಲ ಅನ್ನೋ ಅಸಮಾಧಾನ ಅವರ ಟಿಕೆಟ್ ಗೆ ಅಡ್ಡಿಯುಂಟು ಮಾಡಬಹುದು ಅನ್ನೋದು ಅನುಭವಿಗಳ ಅಭಿಪ್ರಾಯ. ಇಂತಹ ಬೆಳವಣಿಗೆಗಳನ್ನು ಗಮನಿಸಿರುವ ಜೆಡಿಸ್ ಮುಖಂಡರು ಸಿದ್ದೇಶ್ ನಾಗೇಂದ್ರ ಸಂಪರ್ಕದಲ್ಲಿದ್ದಾರೆ ಅನ್ನೋ ವಿಚಾರ ತಳ್ಳಿ ಹಾಕುವಂತಿಲ್ಲ. ಈ ಬಾರಿ ಲಿಂಗೇಶ್ ರನ್ನು ತಟಸ್ಥಗೊಳಿಸಿ ಸಿದ್ದೇಶ್ ನಾಗೇಂದ್ರರನ್ನು ಕಣಕ್ಕಿಳಿಸಿದರೆ ಗೆಲುವು ಸುಲಭಸಾಧ್ಯ ಅನ್ನೋ ಲೆಕ್ಕಾಚಾರ ಅವರದ್ದು.

See also  ಹಾಸನ: ಪೂಜಾರಿಯ ಬೆತ್ತದ ಏಟಿಗೆ ಮಹಿಳೆ ಸಾವು

ಬೂಸ್ಟರ್ ಡೋಸ್ ಆಗಲಿದ್ದಾರೆಯೇ ಎ.ಮಂಜು

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಪಕ್ಷ ಬಿಟ್ಟವರ ಆತ್ಮಾಭಿಮಾನಕ್ಕೆ ರಣಪೆಟ್ಟು ನೀಡುವ ಹೆಚ್.ಡಿ ಕುಮಾರಸ್ವಾಮಿಯವರ ಮಾಸ್ಟರ್ ಮೈಂಡ್ ಹಾಗೂ ಮಾಸ್ಟರ್ ಪ್ಲ್ಯಾನ್ ಸರಿಯಾಗಿಯೇ ಕೆಲಸ ಮಾಡುವ ಲಕ್ಷಣಗಳು ನಿಚ್ಛಳವಾಗುತ್ತಿದೆ. ಸಧ್ಯದ ಮಟ್ಟಿಗಂತೂ ಎ,ಮಂಜು ಜಿಲ್ಲಾ ಜೆಡಿಎಸ್ ಪಾಲಿನ ಬೂಸ್ಟರ್ ಡೋಸ್ ಆಗೋದ್ರಲ್ಲಿ ಯಾವುದೇ ಸಂದೇಹ ಇಲ್ಲಾ. ಜಿಲ್ಲೆಯಲ್ಲಿ ಜೆಡಿಎಸ್ ಸಂಖ್ಯೆ ಮೂರರಿಂದ ನಾಲ್ಕಕ್ಕೆ ಕುಸಿಯಲಿದೆ ಎನ್ನುವ ವಾತಾವರಣ ಇದ್ದ ಸಂದರ್ಭದಲ್ಲೇ ? ಶತ್ರುವಿನ ಶತ್ರು..? ಪಾಲಿಸಿ ವರ್ಕ್ ಔಟ್ ಮಾಡಿ ಗೆಲುವಿನ ಹಾದಿ ಸುಗಮಗೊಳಿಸಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು