ಹಾಸನ: ಅರ್ಧಬಂರ್ಧ ಕಾಮಗಾರಿಗೆ ವಿವೇಕ ನಗರದ ನಿವಾಸಿಗಳು ಪರದಾಟ ಪಡುವಂತಾಗಿದೆ, ನಿತ್ಯ ಮನೆ ಮುಂದೆ ಹರಿಯುತ್ತಿರುವ ಯುಜಿಡಿ ನೀರಿನ ನಡುವೆ ಜೀವನ ಸಾಗಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದ್ದು, ಸಮಸ್ಯೆ ಆಲಿಸದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಹೌದು, ಸತ್ಯಮಂಗಲ ಗ್ರಾಮ ಪಂಚಾಯಿತಿ ಇಡೀ ರಾಜ್ಯದಲ್ಲೇ ೨ನೇ ಅತೀ ದೊಡ್ಡ ಗ್ರಾಮ ಪಂಚಾಯಿತಿ ಎಂಬ ಖ್ಯಾತಿ ಪಡೆದಿದ್ದು, ಆದರೆ ಇಲ್ಲಿಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸೋಗಲಾಡಿತನದಿಂದ ಅಪಖ್ಯಾತಿ ಪಡೆಯುತ್ತಿದೆ. ಇತ್ತ ಹಾಸನ ನಗರವನ್ನು ನಗರಪಾಲಿಕೆಯನ್ನಾಗಿಸುವ ಪ್ರಕ್ರಿಯೆ ಅರ್ಧಕ್ಕೆ ನಿಂತಿರುವುದರಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು ನಗರಸಭೆ ಮೇಲೆ ಭಾರ ಹಾಕಿ ನಿದ್ದೆಗೆ ಜಾರಿದ್ದು, ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಹಾಸನದ ವಿವೇಕನಗರದಲ್ಲಿ ಕಳೆದ ೪-೫ ತಿಂಗಳುಗಳಿಂದ ನಡು ರಸ್ತೆಯಲ್ಲೇ ಯುಜಿಡಿ ನೀರು ಹರಿಯುತ್ತಿದೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಗ್ರಾಮ ಪಂಚಾಯಿತಿಯವರು, ನಗರಸಭೆಯತ್ತ ಬೊಟ್ಟು ಮಾಡಿ ತೋರಿಸುತ್ತಿದ್ರೆ, ನಗರಸಭೆಯವರು ನಮಗೂ ಇದಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ಧಾರೆ. ಜನಪ್ರತಿನಿಧಿಗಳೆನ್ನಿಸಿಕೊಂಡವರ ಜಾಣ ಮೌನದಿಂದ ಇಲ್ಲಿಯ ನಿವಾಸಿಗಳ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜೀವನ ಸಾಗಿಸುವಂತಾಗಿದೆ.
ಸ್ಥಳೀಯ ನಿವಾಸಿಗಳು ಕಳೆದ ೪-೫ ತಿಂಗಳಿಂದ ನಾವು ಸತ್ಯ ಮಂಗಲ ಗ್ರಾಮ ಪಂ. ಗೆ ಅರ್ಜಿ ಸಲ್ಲಿಸಿದ್ದೆವೆ. ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬಹಳ ತೊಂದರೆಯಾಗುತ್ತಿದೆ, ಕಾಯಿಲೆ ಹರಡುತ್ತಿದೆ. ಅಧಿಕಾರಿಗಳು ಒಬ್ಬರ ಮೇಲೊಬ್ಬರು ಹಾಕ್ತಿದಾರೆ. ಹೀಗೆ ಮುಂದುವರಿದ್ರೆ ಕೆಟ್ಟ ವಾಸನೆಯೊಂದಿಗೆ ಹೇಗೆ ಜೀವನ ಸಾಗಿಸೋದು? ಇದಕ್ಕೆ ಸಂಬಂಧಪಟ್ಟವರು ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ಧಾರೆ.
ಒಟ್ಟಿನಲ್ಲಿ ಹಾಸನ ನಗರವನ್ನು ಸ್ವಚ್ಛ ಹಾಗೂ ಕಸ ಮುಕ್ತವನ್ನಾಗುಸುತ್ತೇನ್ನುವ ನಗರಸಭೆ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಇನ್ನಾದ್ರೂ ಎಚ್ಚೆತ್ತು ವಿವೇಕ ನಗರದ ನಿವಾಸಿಗಳ ಸಮಸ್ಯೆಗೆ ವಿವೇಕಯುತ ಪರಿಹಾರ ಕಲ್ಪಿಸುವರೇ ಕಾದು ನೋಡಬೇಕಿದೆ.